ADVERTISEMENT

₹23,000 ಕೋಟಿ ಅಕ್ರಮ ಹಣ ವಶ, ಸಂತ್ರಸ್ತರಿಗೆ ವಿತರಣೆ: ಇ.ಡಿ.

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 15:37 IST
Last Updated 7 ಆಗಸ್ಟ್ 2025, 15:37 IST
..
..   

ನವದೆಹಲಿ: ಜಾರಿ ನಿರ್ದೇಶನಾಲಯವು (ಇ.ಡಿ) ₹23,000 ಕೋಟಿ ಅಕ್ರಮ ಹಣವನ್ನು ವಶಪಡಿಸಿಕೊಂಡಿದ್ದು, ಆರ್ಥಿಕ ಅಪರಾಧ ಪ್ರಕರಣಗಳ ಸಂತ್ರಸ್ತರಿಗೆ ಆ ಮೊತ್ತವನ್ನು ವಿತರಿಸಿದೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದ್ದಾರೆ.

ಭೂಷಣ್ ಪವರ್ ಆ್ಯಂಡ್ ಸ್ಟೀಲ್‌ ಲಿಮಿಟೆಡ್‌ (ಬಿಪಿಎಸ್‌ಎಲ್‌) ಸಂಸ್ಥೆಯ ಪುನರುಜ್ಜೀವನ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಆದೇಶದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ, ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ಗುರುವಾರ ವಿಚಾರಣೆ ನಡೆಸಿತು.

ಈ ವೇಳೆ, ಪ್ರಕರಣಕ್ಕೆ ಸಂಬಂಧಿಸಿದ ಹಲವು ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ವಕೀಲರು, ಬಿಪಿಎಸ್‌ಎಲ್‌ ಪ್ರಕರಣದಲ್ಲಿ ಇ.ಡಿ. ತನಿಖೆಯನ್ನೂ ಉಲ್ಲೇಖಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ‘ಈ ಪ್ರಕರಣದಲ್ಲೂ ಇ.ಡಿ. ಇದೆಯೇ?’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಉತ್ತರಿಸಿದ ಸಾಲಿಸಿಟರ್‌ ಜನರಲ್‌, ‘ಯಾವುದೇ ನ್ಯಾಯಾಲಯಗಳಲ್ಲಿ ಈವರೆಗೆ ಹೇಳದ ಸತ್ಯ ಹೇಳುತ್ತೇನೆ. ₹23,000 ಕೋಟಿ ಅಕ್ರಮ ಹಣವನ್ನು ಇ.ಡಿ ವಶಪಡಿಸಿಕೊಂಡು, ಸಂತ್ರಸ್ತರಿಗೆ ವಿತರಿಸಿದೆ. ಕೆಲವು ಪ್ರಕರಣಗಳಲ್ಲಿ ರಾಜಕಾರಣಿಗಳ ನಿವಾಸಗಳನ್ನೂ ಶೋಧಿಸಲಾಗಿದ್ದು, ಹಣ ಎಣಿಸುವ ಯಂತ್ರವೇ ಕೆಲಸ ನಿಲ್ಲಿಸಿಬಿಡುವಷ್ಟು ಹಣ ಅಲ್ಲಿ ಪತ್ತೆಯಾಗಿದೆ. ಅಂಥ ದೊಡ್ಡ ದೊಡ್ಡ ರಾಜಕಾರಣಿಗಳ ವಿರುದ್ಧ ತನಿಖೆ ನಡೆದಾಗ ಯೂಟ್ಯೂಬ್‌ನಲ್ಲಿ ಅದಕ್ಕೆ ಬೇರೆ ಬೇರೆ ಆಯಾಮ ನೀಡುತ್ತಾರೆ’ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಜೆಐ, ‘ಆಯಾಮಗಳು, ದೃಷ್ಟಿಕೋನಗಳನ್ನು ಆಧರಿಸಿ ನಾವು ಪ್ರಕರಣಗಳನ್ನು ನಿರ್ಧರಿಸುವುದಿಲ್ಲ. ನಾನು ಸುದ್ದಿ ವಾಹಿನಿಗಳನ್ನು ನೋಡುವುದಿಲ್ಲ. ಬರೀ ದಿನ ಪತ್ರಿಕೆಗಳಲ್ಲಿನ ತಲೆಬರಹಗಳನ್ನು ಪ್ರತಿ ದಿನ ಬೆಳಿಗ್ಗೆ ಗಮನಿಸುತ್ತೇನೆ’ ಎಂದಿದ್ದಾರೆ.

ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿರುವ ವಿವಿಧ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯ ಮಿತಿ ಮೀರಿ ನಡೆದುಕೊಳ್ಳುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ವಿವಿಧ ಪೀಠಗಳು ಬೆರಳು ತೋರಿದ್ದ ಬೆನ್ನಲ್ಲೇ ನ್ಯಾಯಾಲಯದಲ್ಲಿ ಇ.ಡಿ. ನೀಡಿರುವ ಈ ಹೇಳಿಕೆ ಮಹತ್ವ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.