ನವದೆಹಲಿ: ಜಾರಿ ನಿರ್ದೇಶನಾಲಯವು (ಇ.ಡಿ) ‘ಎಲ್ಲ ಮಿತಿಗಳನ್ನೂ ಮೀರುತ್ತಿದೆ’, ಆಡಳಿತ ವ್ಯವಸ್ಥೆಯಲ್ಲಿನ ಒಕ್ಕೂಟ ತತ್ವವನ್ನು ಉಲ್ಲಂಘಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ತಮಿಳುನಾಡಿನ ಸರ್ಕಾರಿ ಸ್ವಾಮ್ಯದ ಮದ್ಯದ ಚಿಲ್ಲರೆ ಮಾರಾಟ ಸಂಸ್ಥೆ ‘ಟಾಸ್ಮಾಕ್’ ವಿರುದ್ಧ ಹಣದ ಅಕ್ರಮ ವರ್ಗಾವಣೆ ಆರೋಪದ ಅಡಿ ನಡೆಯುತ್ತಿದ್ದ ತನಿಖೆಗೆ ತಡೆ ನೀಡಿದೆ. ತಮಿಳುನಾಡಿನಲ್ಲಿ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಭಾಗವಾಗಿ ಈ ತನಿಖೆ ನಡೆಯುತ್ತಿತ್ತು.
ತಮಿಳುನಾಡು ಸರ್ಕಾರ ಮತ್ತು ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮ (ಟಾಸ್ಮಾಕ್) ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್ ಅವರು ಇರುವ ವಿಭಾಗೀಯ ಪೀಠವು ಇ.ಡಿ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರಲ್ಲಿ ‘ನಿಮ್ಮ ಇ.ಡಿ. ಎಲ್ಲ ಮಿತಿಗಳನ್ನೂ ಮೀರುತ್ತಿದೆ’ ಎಂದು ಹೇಳಿತು.
ಹಣದ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯ (ಪಿಎಂಎಲ್‌ಎ) ಕಠಿಣ ಅಂಶಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ಹಲವು ಪೀಠಗಳು ಇ.ಡಿ. ಬಗ್ಗೆ ಹಿಂದೆಯೂ ವಿವಿಧ ಸಂದರ್ಭಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿವೆ.
ಜಾರಿ ನಿರ್ದೇಶನಾಲಯವು ಈ ಕಾಯ್ದೆಯನ್ನು ಕೇಂದ್ರ ಸರ್ಕಾರದ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಕೂಡ ಹಲವು ಸಂದರ್ಭಗಳಲ್ಲಿ ಪ್ರತಿಭಟನೆ ದಾಖಲಿಸಿವೆ.
ಟಾಸ್ಮಾಕ್ ಮೇಲೆ ಇ.ಡಿ ಅಧಿಕಾರಿಗಳು ನಡೆಸಿದ ದಾಳಿಯನ್ನು ಪ್ರಶ್ನಿಸಿದ ಸಿಜೆಐ ಗವಾಯಿ ಅವರು, ‘ಜಾರಿ ನಿರ್ದೇಶನಾಲಯವು (ಆಡಳಿತದ) ಒಕ್ಕೂಟ ತತ್ವವನ್ನು ಉಲ್ಲಂಘನೆ ಮಾಡುತ್ತಿದೆ’ ಎಂದು ಹೇಳಿದರು.
ತಮಿಳುನಾಡು ಸರ್ಕಾರ ಮತ್ತು ಟಾಸ್ಮಾಕ್ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್ ಹಾಗೂ ಅಮಿತ್ ಆನಂದ್ ತಿವಾರಿ ಹಾಜರಿದ್ದರು.
ವಿರೋಧ: ಟಾಸ್ಮಾಕ್ ವಿರುದ್ಧದ ತನಿಖೆಗೆ ತಡೆ ನೀಡಿದ ಪೀಠದ ಕ್ರಮವನ್ನು ವಿರೋಧಿಸಿದ ರಾಜು ಅವರು, ₹1,000 ಕೋಟಿಗೂ ಹೆಚ್ಚು ಮೊತ್ತದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಚಾರ ಇದು ಎಂದರು. ‘ಕನಿಷ್ಠ ಪಕ್ಷ ಈ ಪ್ರಕರಣದಲ್ಲಿಯಂತೂ ಇ.ಡಿ ತನ್ನ ಮಿತಿಯನ್ನು ಮೀರಿಲ್ಲ’ ಎಂದು ಅವರು ವಿವರಿಸಿದರು.
ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಬಗ್ಗೆ ತಮಿಳುನಾಡು ಸರ್ಕಾರ ಮತ್ತು ಟಾಸ್ಮಾಕ್ ಕ್ರಿಮಿನಲ್ ಕ್ರಮಕ್ಕೆ ಮುಂದಾಗಿವೆ ಎಂದು ಸಿಬಲ್ ತಿಳಿಸಿದರು.
2014ರ ನಂತರದಲ್ಲಿ ಮದ್ಯದ ಅಂಗಡಿಗೆ ಪರವಾನಗಿ ನೀಡುವಲ್ಲಿ ತಪ್ಪು ಮಾಡಿರುವ ಆರೋಪ ಹೊತ್ತವರ ವಿರುದ್ಧ ಒಟ್ಟು 41 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಆದರೆ ಈಗ ಮಧ್ಯಪ್ರವೇಶ ಮಾಡಿರುವ ಇ.ಡಿ., ಟಾಸ್ಮಾಕ್ ಅನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ಸಿಬಲ್ ದೂರಿದರು.
‘ಸರ್ಕಾರವು ನಡೆಸುತ್ತಿರುವ ಟಾಸ್ಮಾಕ್ ಮೇಲೆ ನೀವು ದಾಳಿ ನಡೆಸಿದ್ದು ಹೇಗೆ’ ಎಂದು ಪೀಠವು ಪ್ರಶ್ನಿಸಿತು.
ಟಾಸ್ಮಾಕ್‌ಗೆ ಸೇರಿದ ಸ್ಥಳಗಳಲ್ಲಿ ಇ.ಡಿ ದಾಳಿ ನಡೆಸಿರುವುದನ್ನು ಪ್ರಶ್ನಿಸಿ ತಮಿಳುನಾಡಿನ ಡಿಎಂಕೆ ನೇತೃತ್ವದ ಸರ್ಕಾರ ಹಾಗೂ ಟಾಸ್ಮಾಕ್ ಸಂಸ್ಥೆ ಅರ್ಜಿ ಸಲ್ಲಿಸಿವೆ. ಇ.ಡಿ. ಕ್ರಮವನ್ನು ಎತ್ತಿಹಿಡಿದು ಮದ್ರಾಸ್ ಹೈಕೋರ್ಟ್ ಏಪ್ರಿಲ್ 23ರಂದು ನೀಡಿದ ಆದೇಶವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಆದೇಶದಿಂದಾಗಿ ಸಾಂವಿಧಾನಿಕ ಹಕ್ಕುಗಳು ಮತ್ತು ಒಕ್ಕೂಟ ವ್ಯವಸ್ಥೆಯನ್ನು ಉಲ್ಲಂಘಿಸಿದಂತಾಗಿದೆ ಎಂದು ಅರ್ಜಿಯು ದೂರಿದೆ.
‘ಅಧಿಕಾರ ಕಿತ್ತುಕೊಳ್ಳಲು ಇ.ಡಿ. ಯತ್ನ’
ವ್ಯಾಪಕವಾದ ಪರಿಣಾಮವನ್ನು ಹೊಂದಿರುವ ಕಾನೂನಿನ ಪ್ರಶ್ನೆಯನ್ನು ಈ ಅರ್ಜಿಯು ಒಳಗೊಂಡಿದೆ. ತನ್ನ ವ್ಯಾಪ್ತಿಯನ್ನು ಮೀರಿ ವರ್ತಿಸಿ, ಅಪರಾಧ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಹೊಂದಿರುವ ಅಧಿಕಾರವನ್ನು ಕಿತ್ತುಕೊಳ್ಳಲು ಯತ್ನಿಸುವ ಮೂಲಕ ಇ.ಡಿ. ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನೂ ಎತ್ತಿದೆ.ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯಲ್ಲಿನ ಮಾತು
ಸರ್ಕಾರದ ವಾದವೇನು?
ಮಾರ್ಚ್ 6ರಿಂದ 8ರ ನಡುವೆ ಇ.ಡಿ ನಡೆಸಿದ 60 ತಾಸುಗಳ ಶೋಧ ಮತ್ತು ಮುಟ್ಟುಗೋಲು ಪ್ರಕ್ರಿಯೆಯು ಕಾನೂನು ಸಿಂಧುತ್ವ ಹೊಂದಿದೆಯೇ?
ಯಾವುದೇ ಎಫ್‌ಐಆರ್‌ನಲ್ಲಿ ಟಾಸ್ಮಾಕ್ ಸಂಸ್ಥೆಯನ್ನು ಆರೋಪಿ ಎಂದು ಹೆಸರಿಸಿಲ್ಲ, ಹಲವು ಪ್ರಕರಣಗಳಲ್ಲಿ ಟಾಸ್ಮಾಕ್ ದೂರುದಾರ ಎಂದು ನಮೂದಿಸಲಾಗಿದೆ
ಟಾಸ್ಮಾಕ್ ಸಂಸ್ಥೆಯು ಯಾವುದೇ ಮೂಲ ಅಪರಾಧದಲ್ಲಿ ಭಾಗಿಯಾದ ಆರೋಪ ಹೊತ್ತಿಲ್ಲ. ಹೀಗಿರುವಾಗ, ಪಿಎಂಎಲ್‌ಎ ಅಡಿಯಲ್ಲಿ ಕ್ರಮ ಕೈಗೊಳ್ಳಲು ಇ.ಡಿ.ಗೆ ಅಧಿಕಾರ ಇಲ್ಲ
2021ರಲ್ಲೇ ಎಫ್‌ಐಆರ್ ದಾಖಲಿಸಲಾಗಿದೆ. ಶೋಧ ಕಾರ್ಯ ನಡೆಸಲು ಇಷ್ಟೊಂದು ಸಮಯ ತೆಗೆದುಕೊಂಡಿದ್ದು ಏಕೆ?
ಇ.ಡಿ ನಡೆಯು ಯಾವುದೇ ನಿರ್ದಿಷ್ಟ ವಿಷಯದ ಬಗೆಗಿನ ತನಿಖೆ ಅಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.