ADVERTISEMENT

ಸಾರ್ವಜನಿಕ ಸೇವೆಯ ಮೇಲೆ ಅಹಂ ಮೇಲುಗೈ ಸಾಧಿಸಿದೆ: ಮಮತಾ ವಿರುದ್ಧ ರಾಜ್ಯಪಾಲರ ಕಿಡಿ

ಪಿಟಿಐ
Published 1 ಜೂನ್ 2021, 11:28 IST
Last Updated 1 ಜೂನ್ 2021, 11:28 IST
   

ಕೋಲ್ಕತ್ತ: ಯಸ್‌ ಚಂಡಮಾರುತದಿಂದಾಗಿ ಆಗಿರುವ ಹಾನಿಯ ಪರಿಶೀಲನೆಗೆ ಮೇ 28 ರಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೈರುಹಾಜರಿ ಬಗ್ಗೆ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್‌ ಧನ್‌ಕರ್‌ ಮಂಗಳವಾರ 'ಸಾರ್ವಜನಿಕ ಸೇವೆಯ ಮೇಲೆ ಅಹಂ ಮೇಲುಗೈ ಸಾಧಿಸಿದೆ' ಎಂದು ಹೇಳುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ರಾಜ್ಯಪಾಲರ ಅಭಿಪ್ರಾಯವು 'ದುರದೃಷ್ಟಕರ' ಎಂದಿರುವ ಆಡಳಿತ ಪಕ್ಷ, ದಿನದ 24 ಗಂಟೆಯೂ ಮುಖ್ಯಮಂತ್ರಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ ಮತ್ತು ಅವರ ಎಲ್ಲ ಕಾರ್ಯಗಳು ರಾಜ್ಯದ ಹಿತಾಸಕ್ತಿಗಳ ಬಗೆಗಿನ ಅವರ ಕಾಳಜಿಯಿಂದ ಪ್ರೇರೇಪಿತವಾಗಿರುತ್ತವೆ ಎಂದು ಪ್ರತಿಪಾದಿಸಿದೆ.

ಪಶ್ಚಿಮ ಮೇದಿನಿಪುರ ಜಿಲ್ಲೆಯ ಕಲೈಕುಂಡದಲ್ಲಿ ನಡೆಯುವ ಸಭೆಯ ಮೊದಲು ಮುಖ್ಯಮಂತ್ರಿಗಳು ತಮಗೆ ಕರೆ ಮಾಡಿದ್ದರು ಮತ್ತು ಅಲ್ಲಿ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿಯವರು ಹಾಜರಿದ್ದರೆ ತಾವು ಸಭೆಗೆ ಹಾಜರಾಗುವುದಿಲ್ಲ ಎನ್ನುವುದನ್ನು ಸೂಚಿಸಿದ್ದರು ಎಂದು ಧನ್‌ಕರ್‌ ಹೇಳಿದ್ದಾರೆ.

ADVERTISEMENT

'ಸಭೆಗೆ ಹಾಜರಾಗದಿರುವುದಕ್ಕೆ ಸುಳ್ಳು ಕಾರಣಗಳನ್ನು ನೀಡಲಾಗಿದೆ: ಮೇ 27 ರಂದು 23.16 ಗಂಟೆಗೆ ಸಿಎಂ ಮಮತಾ ಟ್ವಿಟರ್ ಖಾತೆಯಿಂದ 'ನಾನು ಮಾತನಾಡಬಹುದೇ? ತುರ್ತು' ಎಂದು ತಡರಾತ್ರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂದೇಶ ಕಳುಹಿಸಿದ್ದರು' ಎಂದು ಧಂಕರ್ ಟ್ವೀಟ್ ಮಾಡಿದ್ದಾರೆ.

'ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಹಾಜರಾಗುವುದಾದರೆ, ಯಸ್ ಚಂಡಮಾರುತದ ಹಾನಿಯ ಪರಿಶೀಲನಾ ಸಭೆಯನ್ನು ಆಕೆ ಮತ್ತು ಅಧಿಕಾರಿಗಳು ಬಹಿಷ್ಕರಿಸುವುದಾಗಿ ಫೋನ್‌ ಮೂಲಕ ಅನಂತರ ಸೂಚಿಸಿದರು. ಈ ಮೂಲಕ 'ಸಾರ್ವಜನಿಕ ಸೇವೆಯಲ್ಲಿ ಅಹಂ ಮೇಲುಗೈ ಸಾಧಿಸಿದೆ' ಎಂದು ಅವರು ಮತ್ತೊಂದು ಟ್ವೀಟಿನಲ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ ಸುವೇಂದು ಅಧಿಕಾರಿಯಲ್ಲದೆ ಧನ್‌ಕರ್‌ ಮತ್ತು ಬಿಜೆಪಿ ಸಂಸದ ದೇಬಸ್ರೀ ಚೌಧುರಿ ಉಪಸ್ಥಿತರಿದ್ದರು.

ಸೋಮವಾರ ಪ್ರಧಾನಿಗೆ ಬರೆದ ಪತ್ರದಲ್ಲಿ ಬ್ಯಾನರ್ಜಿ, 'ಎಂದಿನಂತೆ ಪ್ರಧಾನಿ ಮತ್ತು ಸಿಎಂ ನಡುವೆ ಸಭೆಯಾಗಿದ್ದರೆ, ನಾನು ನಿಮ್ಮೊಂದಿಗೆ ಶಾಂತ ರೀತಿಯಲ್ಲಿ ಮಾತುಕತೆ ನಡೆಸಲು ಬಯಸಿದ್ದೆ. ನಿಮ್ಮ ಪಕ್ಷದ ಸ್ಥಳೀಯ ಶಾಸಕರನ್ನು ಸೇರಿಸಿಕೊಳ್ಳಲು ನೀವು ಸಭೆಯ ರಚನೆಯನ್ನು ಪರಿಷ್ಕರಿಸಿದ್ದೀರಿ ಮತ್ತು ಪಿಎಂ-ಸಿಎಂ ಸಭೆಯಲ್ಲಿ ಹಾಜರಾಗಲು ಅವರಿಗೆ ಯಾವುದೇ ಅರ್ಹತೆಯಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.

ಅಲ್ಲದೆ, ಸಭೆಯಲ್ಲಿ ರಾಜ್ಯಪಾಲರು ಮತ್ತು ಇತರ ಕೇಂದ್ರ ಸಚಿವರು ಹಾಜರಾಗಲು ತನಗೆ ಯಾವುದೇ ಆಕ್ಷೇಪವಿಲ್ಲ ಎಂದು ಬ್ಯಾನರ್ಜಿ ಪತ್ರದಲ್ಲಿ ಉಲ್ಲೇಖಿಸಿದ್ದರು.

ಧನ್‌ಕರ್ ಟ್ವೀಟ್‌ಗೆ ಟಿಎಂಸಿಯ ಹಿರಿಯ ನಾಯಕ ಮತ್ತು ಲೋಕಸಭಾ ಸಂಸದ ಸೌಗತಾ ರಾಯ್ ಪ್ರತಿಕ್ರಿಯಿಸಿ, ರಾಜ್ಯಪಾಲರಿಗೆ ಇಂತಹ ಮಾತುಗಳನ್ನು ಹೇಳುವ ಹಕ್ಕಿಲ್ಲ. ಸಿಎಂ ರಾಜ್ಯದ ಹಿತಾಸಕ್ತಿಗಾಗಿ ಗಡಿಯಾರದಂತೆ ಕೆಲಸ ಮಾಡುತ್ತಿದ್ದಾರೆ. ಏನು ಮಾಡಬೇಕೆಂದು ಅವರಿಗೆ ತಿಳಿದಿದೆ' ಎಂದಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.