ADVERTISEMENT

ಕುನೊ ರಾಷ್ಟ್ರೀಯ ಉದ್ಯಾನ: ಆಫ್ರಿಕಾದ 8 ಚೀತಾಗಳು ಇಂದು ಭಾರತಕ್ಕೆ

ಪಿಟಿಐ
Published 28 ಫೆಬ್ರುವರಿ 2026, 0:05 IST
Last Updated 28 ಫೆಬ್ರುವರಿ 2026, 0:05 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಶಿಯೋಪುರ್‌ (ಪಿಟಿಐ): ದಕ್ಷಿಣ ಆಫ್ರಿಕಾದಿಂದ ತರಲಾಗುವ 8 ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಶನಿವಾರ ಮುಂಜಾನೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. 

ಆಫ್ರಿಕಾದಿಂದ ಭಾರತಕ್ಕೆ ಕರೆತರಲಾಗುತ್ತಿರುವ ಚೀತಾಗಳ ಮೂರನೇ ಬ್ಯಾಚ್‌ ಇದಾಗಿದ್ದು, ಈ ಮೂಲಕ ಭಾರತದಲ್ಲಿರುವ ಚೀತಾಗಳ ಸಂಖ್ಯೆಯು 46ಕ್ಕೆ ಏರಿಕೆಯಾಗಲಿದೆ. 

ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಹಾಗೂ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವ ಭೂಪೇಂದರ್‌ ಯಾದವ್‌ ಅವರು ಚೀತಾಗಳನ್ನು ಉದ್ಯಾನಕ್ಕೆ ಬಿಡಲಿದ್ದಾರೆ. 

ADVERTISEMENT

ದಕ್ಷಿಣ ಆಫ್ರಿಕಾದ ಬೋಟ್ಸ್‌ವಾನಾದಿಂದ 6 ಹೆಣ್ಣು ಮತ್ತು 2 ಗಂಡು ಚೀತಾಗಳನ್ನು, ಬಾರತೀಯ ವಾಯುಪಡೆ ವಿಮಾನದಲ್ಲಿ ಗ್ವಾಲಿಯರ್‌ಗೆ ಕರೆತರಲಾಗುವುದು. ಇದು 10 ಗಂಟೆಯ ಪ್ರಯಾಣವಾಗಿರಲಿದೆ. ಗ್ವಾಲಿಯರ್‌ನಿಂದ ಎರಡು ಐಎಎಫ್‌ ಹೆಲಿಕಾಪ್ಟರ್‌ಗಳ ಮೂಲಕ ಚೀತಾಗಳನ್ನು ಉದ್ಯಾನಕ್ಕೆ ಮುಂಜಾನೆ 9ರಿಂದ 10 ಗಂಟೆಯೊಳಗೆ ತರಲಾಗುವುದು ಎಂದು ಚೀತಾ ಯೋಜನೆಯ ನಿರ್ದೇಶಕ ಉತ್ತಮ್ ಶರ್ಮಾ ತಿಳಿಸಿದರು. 

ಚೀತಾಗಳನ್ನು ಒಂದು ತಿಂಗಳು ಕ್ವಾರಂಟೈನ್‌ನಲ್ಲಿ ಇಡಲಾಗುವುದು. 

ಭಾರತದಲ್ಲಿ ನಶಿಸಿಹೋಗಿದ್ದ ಚೀತಾ ಸಂತತಿಯನ್ನು ಮತ್ತೆ ಹೆಚ್ಚಿಸಲು, ‘ಪ್ರಾಜೆಕ್ಟ್‌ ಚೀತಾ’ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಮೊದಲ ಬಾರಿಗೆ ನಮೀಬಿಯಾದಿಂದ 2022ರ ಸೆ.17ರಂದು 5 ಹೆಣ್ಣು ಮತ್ತು 3 ಗಂಡು ಚೀತಾಗಳನ್ನು ತಂದು ಬಿಡಲಾಯಿತು. ಭಾರತದಲ್ಲಿ ಈವರೆಗೆ 39 ಚೀತಾ ಮರಿಗಳು ಜನಿಸಿದ್ದು, 27 ಮರಿಗಳು ಬದುಕುಳಿದಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.