ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ಮುಟ್ಟಾದ 8ನೇ ತರಗತಿ ವಿದ್ಯಾರ್ಥಿನಿಯನ್ನು ಶಾಲಾ ತರಗತಿ ಹೊರಗೆ ಕೂರಿಸಿ ವಾರ್ಷಿಕ ಪರೀಕ್ಷೆ ಬರೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ, ಖಾಸಗಿ ಶಾಲೆಯ ಪ್ರಾಂಶುಪಾಲರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಗುರುವಾರ ತಿಳಿಸಿದೆ.
ಪೊಲ್ಲಾಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಬಾಲಕಿಯನ್ನು ಬುಧವಾರ ಶಾಲಾ ತರಗತಿ ಹೊರಗೆ ಕೂರಿಸಿ ಪರೀಕ್ಷೆ ಬರೆಸಲಾಗಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದರಿಂದಾಗಿ ಪೊಲೀಸರು ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಅಲ್ಲದೆ, ಈ ಕುರಿತು ಸ್ಪಷ್ಟನೆ ನೀಡುವಂತೆ ಶಾಲಾ ಆಡಳಿತ ಮಂಡಳಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಚಿಸಿದ್ದರು.
‘ಈ ಘಟನೆ ಸಂಬಂಧ ಖಾಸಗಿ ಶಾಲೆ ವಿರುದ್ಧ ತನಿಖೆ ಕೈಗೊಳ್ಳಲಾಗಿದೆ. ಶಾಲೆಯ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ. ಮಕ್ಕಳ ಮೇಲೆ ನಡೆಯುವ ಯಾವುದೇ ಬಲವಂತದ ಕ್ರಮವನ್ನು ಸಹಿಸಲಾಗದು. ಪ್ರೀತಿಯ ವಿದ್ಯಾರ್ಥಿ, ಇಲ್ಲಿ ನೀನು ಏಕಾಂಗಿಯಲ್ಲ! ನಿನ್ನೊಂದಿಗೆ ನಾವಿದ್ದೇವೆ’ ಎಂದು ಶಿಕ್ಷಣ ಸಚಿವರು ‘ಎಕ್ಸ್’ ನಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬಾಲಕಿಯ ತಂದೆ, ‘ಕಳೆದ ವಾರ ನನ್ನ ಮಗಳು ಋತುಮತಿಯಾಗಿದ್ದಳು. ಈ ವಾರ ನಿಗದಿಯಾಗಿದ್ದ ಪರೀಕ್ಷೆ ಬರೆಯಲು ಹೋಗುತ್ತೇನೆ ಎಂದಿದ್ದಳು. ಹೀಗಾಗಿ, ಮಗಳು ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಪ್ರತ್ಯೇಕ ಮೇಜು ಮತ್ತು ಕುರ್ಚಿ ವ್ಯವಸ್ಥೆ ಮಾಡುವಂತೆ ಶಾಲಾ ಆಡಳಿತ ಮಂಡಳಿಗೆ ಮನವಿ ಮಾಡಿದ್ದೆ. ಆದರೆ, ಇದಕ್ಕೆ ಸಹಕರಿಸದ ಶಾಲಾ ಆಡಳಿತ ಮಂಡಳಿಯು ತರಗತಿ ಹೊರಗಿರುವ ಮೆಟ್ಟಿಲಿನ ಮೇಲೆ ಕುಳಿತು ಪರೀಕ್ಷೆ ಬರೆಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.