ADVERTISEMENT

70 ಐಷಾರಾಮಿ ಕೊಠಡಿಗಳು, ₹70 ಲಕ್ಷ ಬಿಲ್‌: ಬಂಡಾಯ ಶಾಸಕರ ವಾಸ್ತವ್ಯದ ವಿವರ

ಪಿಟಿಐ
Published 1 ಜುಲೈ 2022, 11:31 IST
Last Updated 1 ಜುಲೈ 2022, 11:31 IST
ಗುವಾಹಟಿಯ ಹೋಟೆಲ್‌ನಲ್ಲಿದ್ದ ಶಾಸಕರು
ಗುವಾಹಟಿಯ ಹೋಟೆಲ್‌ನಲ್ಲಿದ್ದ ಶಾಸಕರು    

ಗುವಾಹಟಿ: ಗುವಾಹಟಿಯ ಐಷಾರಾಮಿ ಹೋಟೆಲ್‌ನಲ್ಲಿ ಎಂಟು ದಿನಗಳ ಕಾಲ ಬೀಡುಬಿಟ್ಟಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಶಿವಸೇನಾದ ಬಂಡಾಯ ಶಾಸಕರು ಬುಧವಾರ ಅಲ್ಲಿಂದ ಹೊರಡುವುದಕ್ಕೂ ಮೊದಲು ಎಲ್ಲ ಬಿಲ್‌ಗಳನ್ನು ಚುಕ್ತಾ ಮಾಡಿದ್ದಾರೆ ಎಂದು ಹೊಟೇಲ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುವಾಹಟಿಯ ಜಲುಕ್‌ಬರಿ ಬಳಿಯ ಗೋಟಾನಗರದಲ್ಲಿರುವ ಸ್ಟಾರ್‌ ಹೋಟೆಲ್‌ ‘ರಾಡಿಸನ್ ಬ್ಲೂ’ನಲ್ಲಿ
ಶಾಸಕರು ತಂಗಿದ್ದರು. ವಾಸ್ತವ್ಯದ ಒಟ್ಟು ಬಿಲ್‌ ಬಗ್ಗೆ ಹೋಟೆಲ್ ಅಧಿಕಾರಿಗಳು ತುಟಿಬಿಚ್ಚಿಲ್ಲ. ಆದರೆ, ₹68-70ಲಕ್ಷ ಹಣ ಪಾವತಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಮಹಾರಾಷ್ಟ್ರದ ಶಾಸಕರು ಮತ್ತು ಅವರ ಬೆಂಬಲಿಗರಿಗಾಗಿ ಹೋಟೆಲ್‌ನ ವಿವಿಧ ಮಹಡಿಗಳಲ್ಲಿ ಒಟ್ಟು 70 ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ಹೀಗಾಗಿ ಜೂನ್ 22 ರಿಂದ ಜೂನ್ 29 ರವರೆಗೆ ಹೊರಗಿನವರಿಗೆ ಹೋಟೆಲ್‌ ಅನ್ನು ನಿರ್ಬಂಧಿಸಲಾಗಿತ್ತು.

ADVERTISEMENT

‘ಮಹಾರಾಷ್ಟ್ರದ ಶಾಸಕರು ಸಾಮಾನ್ಯರಂತೇ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಅವರು ಹೊರಡುವ ಮೊದಲು ಬಿಲ್‌ಗಳನ್ನು ಪಾವತಿಸಿದ್ದಾರೆ. ಯಾವುದೇ ಬಾಕಿ ಉಳಿಸಿಕೊಂಡಿಲ್ಲ’ ಎಂದು ಹೆಸರು ಹೇಳಲು ಇಚ್ಚಿಸದ ಹೋಟೆಲ್‌ನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಆದಾಗ್ಯೂ, ಬಿಲ್‌ನ ಒಟ್ಟು ಮೊತ್ತದ ವಿವರವನ್ನು ಹಂಚಿಕೊಳ್ಳಲು ಅಧಿಕಾರಿ ನಿರಾಕರಿಸಿದರು. ಶಾಸಕರು ‘ಸುಪೀರಿಯರ್‌ (ಅತ್ಯುನ್ನತ) ಮತ್ತು ಡೀಲಕ್ಸ್’ ವರ್ಗದ ಕೊಠಡಿಗಳಲ್ಲಿ ಉಳಿದುಕೊಂಡಿದ್ದರು’ ಎಂದು ಅವರು ಹೇಳಿದರು.

‘ರಾಡಿಸನ್‌ ಬ್ಲೂ’ ನ ವೆಬ್‌ಸೈಟ್‌ ಪ್ರಕಾರ ಗುವಾಹಟಿಯಲ್ಲಿನ ಹೋಟೆಲ್‌ನ ವಿವಿಧ ರೀತಿಯ ಕೊಠಡಿಗಳ ಶುಲ್ಕ ದಿನದಿಂದ ದಿನಕ್ಕೆ ಬದಲಾಗುವಂಥದ್ದೂ, ವೆಚ್ಚದಾಯಕವೂ ಆಗಿದೆ. ಸಾಮಾನ್ಯವಾಗಿ ಸುಪೀರಿಯರ್‌ ಕೊಠಡಿಗಳಿಗೆ ದಿನವೊಂದಕ್ಕೆ ಸುಮಾರು ₹7,500 ಮತ್ತು ಡೀಲಕ್ಸ್‌ಗೆ ₹8,500ಬಾಡಿಗೆ ಇರುತ್ತದೆ ಎಂದು ಮೂಲಗಳು ಹೇಳಿವೆ. ರಿಯಾಯಿತಿ, ತೆರಿಗೆಯನ್ನು ಕೂಡಿ ಕಳೆದ ಮೇಲೆ, ಜಿಎಸ್‌ಟಿ ಸಹಿತ ಒಟ್ಟು ಅಂದಾಜು ₹68 ಲಕ್ಷ ಬಿಲ್‌ ಆಗಿದೆ ಎಂದು ಹೇಳಲಾಗುತ್ತಿದೆ.

ಹೋಟೆಲ್‌ನಲ್ಲಿ ಕೆಲವು ಸುಪೀರಿಯರ್‌ ಕೊಠಡಿಗಳು ಮತ್ತು ಸುಮಾರು 55 ಡೀಲಕ್ಸ್ ಕೊಠಡಿಗಳಿವೆ. ಬಂಡಾಯ ಶಾಸಕರ ಆಹಾರದ ಬಿಲ್ ಸುಮಾರು ₹22 ಲಕ್ಷ ಎಂದು ನಂಬಲಾಗಿದೆ. ವಾಸ್ತವ್ಯದಲ್ಲಿದ್ದ ಶಾಸಕರು ಕೊಠಡಿ ಹೊರತುಪಡಿಸಿ ಬೇರೆ ಯಾವುದೇ ಸೇವೆಗಳನ್ನು ಪಡೆದಿದ್ದಾರೆಯೇ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಹೋಟೆಲ್ ಅಧಿಕಾರಿಯೊಬ್ಬರು, ‘ಕೊಠಡಿಗೆ ಪಾವತಿಸಲಾಗುವ ವೆಚ್ಚದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಮಾತ್ರ ಶಾಸಕರು ಬಳಸಿದ್ದಾರೆ. ‘ಸ್ಪಾ’ನಂತಹ ಪ್ರತ್ಯೇಕ ಶುಲ್ಕದ ಸೇವೆಯನ್ನು ಪಡೆದಿಲ್ಲ’ ಎಂದು ಹೇಳಿದರು.

ಮಹಾರಾಷ್ಟ್ರದ ಮಹಾ ವಿಕಾಸ್ ಆಘಾಡಿ (ಎಂವಿಎ) ಸರ್ಕಾರವನ್ನು ಉರುಳಿಸಿ, ಹೊಸ ಸರ್ಕಾರ ರಚಿಸುವ ಸಲುವಾಗಿ ಶಿಂಧೆ ನೇತೃತ್ವದ ಭಿನ್ನಮತೀಯ ಶಿವಸೇನೆ ಶಾಸಕರು ಮತ್ತು ಕೆಲವು ಸ್ವತಂತ್ರ ಶಾಸಕರು ಮುಂಬೈನಿಂದ ಸುಮಾರು 2,700 ಕಿಮೀ ದೂರದಲ್ಲಿರುವ ಗುವಾಹಟಿಯ ಹೋಟೆಲ್‌ನಲ್ಲಿ ಜೂನ್ 22ರಿಂದಲೂ ತಂಗಿದ್ದರು. ಶಾಸಕರು ಬುಧವಾರ ಗೋವಾಕ್ಕೆ ತೆರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.