ಏಕನಾಥ ಶಿಂದೆ- ಪುತ್ರ ಶ್ರೀಕಾಂತ್ ಶಿಂದೆ
ಮುಂಬೈ: ವೈಯಕ್ತಿಕ ಹಿತಾಸಕ್ತಿಗಿಂತ ಸಾಮೂಹಿಕ ಆಡಳಿತಕ್ಕೆ ಆದ್ಯತೆ ನೀಡುವ ಮೂಲಕ ‘ಮೈತ್ರಿ ಧರ್ಮ‘ ಪಾಲನೆಯ ಉದಾಹರಣೆಯಾಗಿ ತಮ್ಮ ತಂದೆ ಹಾಗೂ ಮಹಾರಾಷ್ಟ್ರದ ಉಸ್ತುವಾರಿ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಶಿವಸೇನಾ ಸಂಸದ ಹಾಗೂ ಪುತ್ರ ಶ್ರೀಕಾಂತ್ ಶಿಂದೆ ತಿಳಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ನಮ್ಮ ತಂದೆ ಅವರು ಮಹಾರಾಷ್ಟ್ರದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರ ಸಮರ್ಪಣಾ ಭಾವನೆಯೂ ಪ್ರತಿಯೊಂದು ವರ್ಗಗಳಿಗೂ ಒಂದೇ ರೀತಿಯಾಗಿದೆ. ಸಮಾಜದ ಎಲ್ಲಾ ವರ್ಗಗಳನ್ನು ಸಮಾನದೃಷ್ಟಿಕೋನದಿಂದ ನೋಡುತ್ತಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿರ್ಧಾರಗಳಿಗೆ ಶಿವಸೇನೆ ಸಮ್ಮತಿಸುತ್ತದೆ ಎಂಬ ಏಕನಾಥ ಶಿಂದೆ ಅವರ ಹೇಳಿಕೆಯನ್ನು ಶ್ರೀಕಾಂತ್ ಶಿಂದೆ ಪುನರುಚ್ಚರಿಸಿದ್ದಾರೆ.
ಸಾಮಾನ್ಯವಾಗಿ ಅಧಿಕಾರವು ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ ಏಕನಾಥ ಶಿಂದೆ ಅವರು ಇದರ ಹೊರತಾಗಿದ್ದಾರೆ. ದೇಶ ಮತ್ತು ಜನರ ಸೇವೆಯೇ ಅವರ ಮೊದಲ ಆದ್ಯತೆಯಾಗಿದೆ. ಅವರು ಸಾಮಾನ್ಯ ಜನರಂತೆ ಜೀವನ ನಡೆಸುತ್ತಿದ್ದಾರೆ. ವರ್ಷ ಪೂರ್ತಿ ತಮ್ಮ ಅಧಿಕೃತ ನಿವಾಸವನ್ನು ಜನರನ್ನು ಸಂಪರ್ಕಿಸುವ ಕೇಂದ್ರವನ್ನಾಗಿಸಿದ್ದರು ಎಂದು ಶ್ರೀಕಾಂತ್ ಹೇಳಿದ್ದಾರೆ.
ಬಡವರ ಆಶೀರ್ವಾದವೇ ಏಕನಾಥ ಶಿಂದೆ ಅವರ ನಿಜವಾದ ಸಂಪತ್ತು ಎಂದೂ ಶ್ರೀಕಾಂತ್ ಶಿಂದೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು 288 ಸ್ಥಾನಗಳ ಪೈಕಿ 230 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಪ್ರತಿಪಕ್ಷಗಳ ಮೈತ್ರಿಕೂಟ 46 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.