ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಹಿಂದೊಮ್ಮೆ ಕಾಂಗ್ರೆಸ್ ಸೇರಲು ಮುಂದಾಗಿದ್ದರು ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ರಾಜ್ಯಸಭಾ ಸದಸ್ಯ ಮತ್ತು ಪಕ್ಷದ ಮುಖ್ಯ ವಕ್ತಾರರೂ ಆಗಿರುವ ಅವರು, ಯಾವ ಸಮಯ ಮತ್ತು ಸಂದರ್ಭದಲ್ಲಿ ಶಿಂದೆ ಅವರು ಕಾಂಗ್ರೆಸ್ ಸೇರಲು ಮುಂದಾಗಿದ್ದರು ಎಂಬುದನ್ನು ಸ್ಪಷ್ಟಪಡಿಸಲಿಲ್ಲ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ದಿವಂಗತ ಅಹ್ಮದ್ ಪಟೇಲ್ ಅವರ ಜತೆ ಶಿಂದೆ ಸಂಪರ್ಕದಲ್ಲಿದ್ದರು. ಬೇಕಿದ್ದರೆ ಈ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರನ್ನು ಕೇಳಿ ಎಂದು ಅವರು ತಿಳಿಸಿದ್ದಾರೆ.
ರಾವುತ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಚವಾಣ್ ನಿರಾಕರಿಸಿದ್ದಾರೆ. ಶಿಂದೆ ಅವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ. ಶಿಂದೆ ಅವರ ಆಪ್ತ, ಠಾಣೆ ಸಂಸದ ನರೇಶ್ ಮಸ್ಕೆ ಅವರು, ‘ರಾವುತ್ ಅವರು ಬಹುಷಃ ಭಾಂಗ್‌ನ ನಶೆಯಲ್ಲಿರಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.
‘ರಾಜಕೀಯದಲ್ಲಿ ಯಾವುದು ಅಸಾಧ್ಯವಲ್ಲ’
ಇದೇ ವೇಳೆ ಮಹಾರಾಷ್ಟ್ರ ಮಾಜಿ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರ ‘ಮೈತ್ರಿ ಆಹ್ವಾನದ’ ಬಗ್ಗೆ ಪ್ರತಿಕ್ರಿಯಿಸಿದ ರಾವುತ್, ‘ರಾಜಕೀಯದಲ್ಲಿ ಯಾವುದು ಅಸಾಧ್ಯವಲ್ಲ’ ಎಂದು ಹೇಳಿದ್ದಾರೆ.
ಏಕನಾಥ ಶಿಂದೆ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನದ ‘ಆಫರ್’ ನೀಡಿದ್ದ ನಾನಾ ಪಟೋಲೆ, ಕಾಂಗ್ರೆಸ್ ಜೊತೆ ಮೈತ್ರಿಯಾಗುವಂತೆ ಶುಕ್ರವಾರ ಬಹಿರಂಗ ಆಹ್ವಾನ ನೀಡಿದ್ದರು.
‘2019ರಲ್ಲಿ ಮಹಾ ವಿಕಾಸ ಅಘಾಡಿ ಸ್ಥಾಪನೆಯಾಗುತ್ತದೆ, 2022ರಲ್ಲಿ ಶಿಂದೆ ನೇತೃತ್ವದಲ್ಲಿ ‘ಅಸಂವಿಧಾನಿಕ’ ಸರ್ಕಾರ ರಚನೆಯಾಗುತ್ತದೆ, 2024 ದೇವೇಂದ್ರ ಫಡಣವೀಸ್ ಅವರು ಸಂಪೂರ್ಣ ಬಹುಮತ ಪಡೆಯುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ’ ಎಂದು ರಾವುತ್ ಹೇಳಿದ್ದಾರೆ.
‘ಬಾಳಾಸಾಹೇಬ್ ಠಾಕ್ರೆ ಅವರ ಕೇಸರಿ ಧ್ವಜಕ್ಕೂ ಶಿಂದೆಗೂ ಯಾವುದೇ ಸಂಬಂಧವಿಲ್ಲ. ಶಿಂದೆ ಮತ್ತು ಅಜಿತ್ ಪವಾರ್ ಅವರು ಬಿಜೆಪಿ ಧ್ವಜವನ್ನು ಹೊತ್ತುಕೊಂಡಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.