ADVERTISEMENT

ಪಶ್ಚಿಮ ಬಂಗಾಳ: ಕೂಚ್‌ ಬಿಹಾರ್ ಘರ್ಷಣೆಯಲ್ಲಿ ಐವರು ಸಾವು, ಮತದಾನ ಮುಂದೂಡಿಕೆ

4ನೇ ಹಂತದ ಮತದಾನ: ಗೋಲಿಬಾರ್‌

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 21:39 IST
Last Updated 10 ಏಪ್ರಿಲ್ 2021, 21:39 IST
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಬಿಗಿ ಭದ್ರತೆ – ಪಿಟಿಐ ಚಿತ್ರ
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಬಿಗಿ ಭದ್ರತೆ – ಪಿಟಿಐ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಗೆ ಶನಿವಾರ ನಡೆದ ನಾಲ್ಕನೇ ಹಂತದ ಮತದಾನವು ಭಾರಿ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಕೂಚ್‌ ಬಿಹಾರ್ ಜಿಲ್ಲೆಯ ಸೀತಾಲಕುಚಿ ಕ್ಷೇತ್ರದ 126ನೇ ಸಂಖ್ಯೆಯ ಮತಗಟ್ಟೆಯಲ್ಲಿ ಸಿಐಎಸ್‌ಎಫ್‌ (ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ಸಿಬ್ಬಂದಿ ‘ಸ್ವರಕ್ಷಣೆ’ಗಾಗಿ ನಡೆಸಿದ ಗೋಲಿಬಾರ್‌ನಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇದೇ ಕ್ಷೇತ್ರದ 85ನೇ ಸಂಖ್ಯೆಯ ಮತಗಟ್ಟೆಯಲ್ಲಿ ಆನಂದ್‌ ಬರ್ಮನ್‌ ಎಂಬ ಯುವಕರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.

ಐದು ಜಿಲ್ಲೆಗಳ 44 ಕ್ಷೇತ್ರಗಳಿಗೆ ಮತದಾನ ನಡೆಯಿತು. ಶೇ 76.16ರಷ್ಟು (ಸಂಜೆ 5 ಗಂಟೆವರೆಗಿನ ಅಂದಾಜು) ಮತದಾನ ದಾಖಲಾಗಿದೆ.

126ನೇ ಸಂಖ್ಯೆಯ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದರು. ಸಿಐಎಸ್‌ಎಫ್‌ ಸಿಬ್ಬಂದಿ ಅವರಿಗೆ ಶುಶ್ರೂಶೆ ಒದಗಿಸುತ್ತಿದ್ದರು. ಆದರೆ, ಕೇಂದ್ರೀಯ ಪಡೆಯು ಹಾರಿಸಿದ ಗುಂಡಿಗೆ ಆ ವ್ಯಕ್ತಿ ಅಸ್ವಸ್ಥರಾದರು ಎಂಬ ವದಂತಿ ಆ ಪ್ರದೇಶದಲ್ಲಿ ಹರಡಿತು ಎಂದು ಪೊಲೀಸ್‌ ಮೂಲಗಳು ಹೇಳಿವೆ.

ADVERTISEMENT

‘ಸ್ವಲ್ಪ ಹೊತ್ತಿನಲ್ಲಿಯೇ 300ರಿಂದ 400 ಜನರಿದ್ದ ಗುಂಪು ಮತಗಟ್ಟೆಯ ಸಮೀಪ ಜಮಾಯಿಸಿತು. ಈ ಗುಂಪು ಮತ್ತು ಸಿಐಎಸ್‌ಎಫ್‌ ಸಿಬ್ಬಂದಿ ನಡುವೆ ಸಂಘರ್ಷ ಏರ್ಪಟ್ಟಿತು. ಸಿಐಎಸ್‌ಎಫ್‌ ಸಿಬ್ಬಂದಿಯ ಬಂದೂಕು ಕಸಿದುಕೊಳ್ಳಲು ಯತ್ನಿಸಲಾಯಿತು. ಹಾಗಾಗಿ, ಸಿಬ್ಬಂದಿಯು ಗುಂಡು ಹಾರಿಸಿದರು. ಗುಂಪಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ. ಒಬ್ಬರ ತೊಡೆಗೆ ಗುಂಡಿನ
ಗಾಯವಾಗಿದೆ. ಇತರರು ತಳ್ಳಾಟದಲ್ಲಿ ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೇಂದ್ರೀಯ ಪಡೆಯು ‘ಸ್ವ ರಕ್ಷಣೆ’ಗಾಗಿ ಗುಂಡು ಹಾರಾಟ ನಡೆಸಿದೆ ಎಂದು ವಿಶೇಷ ಪೊಲೀಸ್‌ ವೀಕ್ಷಕ ವಿವೇಕ್‌ ದುಬೆ ಅವರು ಚುನಾವಣಾ ಆಯೋಗಕ್ಕೆ ಕೊಟ್ಟ ಆರಂಭಿಕ ವರದಿಯಲ್ಲಿ ಹೇಳಿದ್ದಾರೆ. ಕೂಚ್‌ಬಿಹಾರ್‌ ಜಿಲ್ಲೆಗೆ ಮುಂದಿನ 72 ತಾಸು ರಾಜಕಾರಣಿಗಳ ಪ್ರವೇಶಕ್ಕೆ ಆಯೋಗ ನಿಷೇಧ ಹೇರಿದೆ.

ಮೋದಿ–ಮಮತಾ ಆರೋಪ, ಪ್ರತ್ಯಾರೋಪ
ಹಿಂಸಾಚಾರಕ್ಕೆ ಸಂಬಂಧಿಸಿ ಬಿಜೆಪಿ ಮತ್ತು ಟಿಎಂಸಿ ನಡುವೆ ವಾಕ್ಸಮರ ನಡೆದಿದೆ. ಕೇಂದ್ರೀಯ ಪಡೆಗಳ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ಹಿಂಸಾಚಾರಕ್ಕೆ ಹೊಣೆ ಎಂದು ಮಮತಾ ಆಪಾದಿಸಿದ್ದಾರೆ. ಶಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮತಗಟ್ಟೆಯಲ್ಲೇ ಯುವಕನ ಹತ್ಯೆ
ಕೂಚ್‌ಬಿಹಾರ್‌:
ಸೀತಾಲಕುಚಿ ಕ್ಷೇತ್ರದ 85ನೇ ಸಂಖ್ಯೆಯ ಮತಗಟ್ಟೆಯಲ್ಲಿ ಆನಂದ್‌ ಬರ್ಮನ್‌ ಎಂಬ ಯುವಕನ ಹತ್ಯೆಯಾಗಿದೆ. ಯುವಕನನ್ನು ಮತಗಟ್ಟೆಯಿಂದ ಹೊರಗೆಳೆದು ಗುಂಡು ಹಾರಿಸಿ ಕೊಲ್ಲಲಾಗಿದೆ. ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದಾಗಲೇ ಈ ಹತ್ಯೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಹತ್ಯೆಯ ಹಿಂದೆ ಬಿಜೆಪಿ ಇದೆ ಎಂದು ಟಿಎಂಸಿ ಆರೋಪಿಸಿದೆ. ಮೃತ ವ್ಯಕ್ತಿಯು ತಮ್ಮ ಪಕ್ಷದ ಮತಗಟ್ಟೆ ಏಜೆಂಟ್‌. ಟಿಎಂಸಿ ಆತನನ್ನು ಹತ್ಯೆ ಮಾಡಿದೆ ಎಂದು ಬಿಜೆ‍ಪಿ ಆಪಾದಿಸಿದೆ.

ಹತ್ಯೆಯ ಬಳಿಕ, ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷವೂ ನಡೆಯಿತು. ಮತಗಟ್ಟೆಯ ಹೊರಗೆ ಬಾಂಬ್‌ ಎಸೆಯಲಾಗಿದೆ. ಭದ್ರತೆಗೆ ನಿಯೋಜಿಸಲಾಗಿರುವ ಕೇಂದ್ರೀಯ ಪಡೆಯು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.