ಮತದಾರರ ಪಟ್ಟಿ
– ಎ.ಐ ಚಿತ್ರ
ಗಯಾಜೀ (ಬಿಹಾರ): ‘ಮತದಾರರ ಪಟ್ಟಿ ದೋಷರಹಿತವಾಗಿದೆ ಎಂದು ಚುನಾವಣಾ ಆಯೋಗವು (ಇ.ಸಿ) ಸುಪ್ರೀಂ ಕೋರ್ಟ್‌ನಲ್ಲಿ ಮೊದಲು ಪ್ರಮಾಣಪತ್ರ ಸಲ್ಲಿಸಲಿ. ಹಾಗಾದಲ್ಲಿ, ಹಾಲಿ ಮತದಾರರ ಪಟ್ಟಿಯಲ್ಲಿ ಲೋಪಗಳಿವೆ ಎಂದು ನಾವು ಪ್ರಮಾಣಪತ್ರ ಸಲ್ಲಿಸುತ್ತೇವೆ’ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷವು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರಿಗೆ ತಿರುಗೇಟು ನೀಡಿದೆ.
ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜ್ಞಾನೇಶ್ ಕುಮಾರ್ ಅವರು ‘ಬಿಜೆಪಿ ವಕ್ತಾರ’ನಂತೆ ಮಾತನಾಡಿದ್ದಾರೆ ಎಂದೂ ಪಕ್ಷ ಸೋಮವಾರ ಟೀಕಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತದಾರರ ಪಟ್ಟಿಯ ಅಕ್ರಮಗಳ ಕುರಿತ ತಮ್ಮ ಆರೋಪಗಳಿಗೆ ಏಳು ದಿನಗಳ ಒಳಗಾಗಿ ಲಿಖಿತ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಅವರ ಆರೋಪವನ್ನು ಆಧಾರರಹಿತ ಎಂದು ಪರಿಗಣಿಸಲಾಗುವುದು ಎಂದು ಚುನಾವಣಾ ಆಯೋಗ ಭಾನುವಾರ ಹೇಳಿತ್ತು. ಅದರ ಬೆನ್ನಲ್ಲೇ ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಇಲ್ಲಿ ಆಯೋಜಿಸಿದ್ದ ‘ಮತದಾರನ ಅಧಿಕಾರ ಯಾತ್ರೆ’ ವೇಳೆ ಪಕ್ಷದ ನಾಯಕ ಕನ್ಹಯ್ಯಾ ಕುಮಾರ್ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರ, ‘ನಾವು ಈ ಯಾತ್ರೆ ಆರಂಭಿಸುವ ಸಂದರ್ಭದಲ್ಲಿ ಜ್ಞಾನೇಶ್ ಕುಮಾರ್ ಅವರಿಗೆ ಪತ್ರಿಕಾಗೋಷ್ಠಿ ನಡೆಸಬೇಕಾಯಿತು. ಸಿಇಸಿ ಇದ್ದಾರೆ ಎಂಬುದು ನಮಗೆ ಇದರಿಂದ ತಿಳಿಯಿತು’ ಎಂದು ಹೇಳಿದರು.
‘ಇಷ್ಟು ದಿನ ಅನುರಾಗ್ ಠಾಕೂರ್, ಸಂಬಿತ್ ಪಾತ್ರಾ ಮುಂತಾದವರು ಪ್ರತಿಕ್ರಿಯಿಸುತ್ತಿದ್ದರು. ಕೊನೆಗೂ ಸಿಇಸಿ ಅವರು ಪ್ರತಿಕ್ರಿಯಿಸುವುದನ್ನು ನಾವು ನೋಡಿದ್ದೇವೆ’ ಎಂದರು.
ಕನ್ಹಯ್ಯಾ ಕುಮಾರ್ ಮಾತನಾಡಿ, ‘ಮತದಾರರ ಪಟ್ಟಿಯಲ್ಲಿ ಯಾವುದೇ ದೋಷ ಇಲ್ಲ ಎಂದು ಹೇಳುತ್ತಿದ್ದ ಆಯೋಗ ಇದೀಗ ಪಟ್ಟಿಯಲ್ಲಿ ಇರುವ ಲೋಪಗಳನ್ನು ಸರಿಪಡಿಸಲು ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕೈಗೆತ್ತಿಕೊಳ್ಳಲಾಗಿದೆ ಎನ್ನುತ್ತಿದೆ. ಅಂದರೆ, ಮತದಾರರ ಪಟ್ಟಿಯಲ್ಲಿ ಲೋಪ ಇರುವುದನ್ನು ಆಯೋಗ ಒಪ್ಪಿಕೊಂಡಿದೆ’ ಎಂದು ಹೇಳಿದರು.
‘ರಾಹುಲ್ ಗಾಂಧಿ ಅವರು ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಬಗ್ಗೆ ಪುರಾವೆ ನೀಡಿದಾಗ, ಚುನಾವಣಾ ಆಯೋಗವು ಪ್ರಮಾಣಪತ್ರ ಸಲ್ಲಿಸುವಂತೆ ಕೇಳಿಕೊಂಡಿತು. ಮುಖ್ಯ ಚುನಾವಣಾ ಆಯುಕ್ತರು ಬಿಜೆಪಿ ವಕ್ತಾರರ ರೀತಿಯಲ್ಲಿ ಮಾತನಾಡುತ್ತಿರುವಂತೆ ತೋರುತ್ತಿದೆ. ನಾವು ಮುಂದಿಟ್ಟಿರುವ ಪ್ರಶ್ನೆಗಳಿಗೆ ಪತ್ರಿಕಾಗೋಷ್ಠಿಯಲ್ಲಿ ಅವರು ಯಾವುದೇ ಉತ್ತರ ನೀಡಿಲ್ಲ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.