ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಸಾಮೂಹಿಕ ಮತದಾರರ ಪಟ್ಟಿ ಡಿಲೀಟ್ ಮಾಡಲು ಯತ್ನಿಸಿದ ಆರೋಪಿಗಳನ್ನು ಚುನಾವಣಾ ಆಯೋಗ 18 ತಿಂಗಳಿನಿಂದ ‘ಕಲ್ಲಿನ ಗೋಡೆ‘ಯಂತೆ ನಿಂತು ರಕ್ಷಣೆ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ಆಳಂದಲ್ಲಿ ಮತದಾರರ ಪಟ್ಟಿ ಡಿಲೀಟ್ ಮಾಡಲು ಯತ್ನಿಸಿದ ಪ್ರಕರಣವನ್ನು ಕರ್ನಾಟಕ ಸರ್ಕಾರ ಸಿಐಡಿ ತನಿಖೆ ನಡೆಸುತ್ತಿದೆ. ಮತಕಳ್ಳತನದಿಂದಾಗಿ ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವಾಗ ಪ್ರಜಾಪ್ರಭುತ್ವವನ್ನು ಉಳಿಸಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ವೇಳೆ ಅವರು, ಆಳಂದದಲ್ಲಿ ಮತ ಕಳ್ಳತನಕ್ಕೆ ಯತ್ನಿಸಿರುವುದರ ಕುರಿತು ರಾಹುಲ್ ಗಾಂಧಿಯವರು ಪುರಾವೆ ಸಹಿತ ಬಹಿರಂಗಪಡಿಸಿದ್ದಾರೆ ಎಂದರು.
ಇದೇ ವೇಳೆ ಅವರು, 3 ಪ್ರಶ್ನೆಗಳನ್ನು ಕೂಡ ಕೇಳಿದ್ದಾರೆ. ಚುನಾವಣಾ ಆಯೋಗ ಯಾರನ್ನು ರಕ್ಷಿಸುತ್ತಿದೆ? ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ನೇಮಕಗೊಂಡಿರುವ ಸಂಸ್ಥೆಗಳನ್ನೇ ಬಿಜೆಪಿ ನಾಶಪಡಿಸುತ್ತಿದೆಯೇ? 'ಮತ ಕಳ್ಳತನದ ಫ್ಯಾಕ್ಟರಿ' ಚುನಾವಣಾ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವಾಗ ನಾವು ಪ್ರಜಾಪ್ರಭುತ್ವವನ್ನು ಉಳಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು, ಭಾರತೀಯರು, ವಿಶೇಷವಾಗಿ ಯುವಕರು ಈ ಪ್ರಶ್ನೆಗಳನ್ನು ಬಲವಾಗಿ ಕೇಳಬೇಕು ಎಂದು ಖರ್ಗೆ ಹೇಳಿದರು.
ರಾಹುಲ್ ಗಾಂಧಿ ಆರೋಪವೇನು?
ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ ಕಳ್ಳತನ ಮಾಡುತ್ತಿರುವವರನ್ನು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸುತ್ತಿರುವವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.
ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದ ಮತದಾನದ ದತ್ತಾಂಶಗಳನ್ನು ಉಲ್ಲೇಖಿಸಿ ಚುನಾವಣೆಗೂ ಮೊದಲೆ ಕಾಂಗ್ರೆಸ್ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ ಚುನಾವಣೆಗಳು ಯಾವ ರೀತಿಯಾಗಿ ನಕಲಿಯಾಗಿವೆ ಎಂಬುದರ ಕುರಿತು ದೇಶದ ಜನರಿಗೆ ತಿಳಿಸುವಲ್ಲಿ ಆಳಂದ ಕ್ಷೇತ್ರ ಮತ್ತೊಂದು ಉದಾಹರಣೆಯಾಗಿದೆ. ಚುನಾವಣಾ ಆಯೋಗ ಮತದಾರರ ಹೆಸರುಗಳನ್ನು ಡಿಲೀಟ್ ಮಾಡುವ ಪದ್ಧತಿಯನ್ನು ಕೈಬಿಡಬೇಕು. ಹಾಗೂ ಕರ್ನಾಟಕ ಸರ್ಕಾರ ಇದರ ಸತ್ಯಾಸತ್ಯತೆಯನ್ನು ತನಿಖೆ ನಡೆಸಿ ಒಂದು ವಾರದೊಳಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.