
ನವದೆಹಲಿ: ಮತದಾರರ ಚೀಟಿ ರದ್ದುಪಡಿಸುವ ಅಥವಾ ಸೇರಿಸುವ ಉದ್ದೇಶದಿಂದ ಅರ್ಜಿ ಸಲ್ಲಿಸಲು ಚುನಾವಣಾ ಆಯೋಗದ ಪೋರ್ಟಲ್‌ಗೆ ಲಾಗಿನ್ ಆಗುವ ವಿಧಾನವನ್ನು, ಆಯೋಗವು ಬಿಗಿಗೊಳಿಸಿದೆ.
ಈ ಮೊದಲು ಎಪಿಕ್ ಸಂಖ್ಯೆ (ಮತದಾರರ ಚೀಟಿ ಸಂಖ್ಯೆ), ಯಾವುದಾದರೂ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಈ ಪೋರ್ಟಲ್‌ಗೆ ಲಾಗಿನ್ ಆಗಬಹುದಾಗಿತ್ತು. ಎಪಿಕ್ ಒಬ್ಬರದು, ಮೊಬೈಲ್ ಇನ್ಯಾರದ್ದೋ ಆಗಿದ್ದರೂ ಲಾಗಿನ್ ಆಗಬಹುದಾಗಿತ್ತು. ಆಳಂದ ಕ್ಷೇತ್ರದ ಪ್ರಕರಣದಲ್ಲಿ ಹೀಗೆಯೇ ಬೇರೆ–ಬೇರೆಯವರ ವಿವರಗಳನ್ನು ಬಳಸಿಕೊಂಡು ಲಾಗಿನ್ ಆಗಲಾಗಿತ್ತು.
ಆದರೆ ಈಗ ಎಪಿಕ್ ಯಾರದ್ದೋ, ಅವರ ಆಧಾರ್ ಜತೆಗೆ ಜೋಡಿಸಿರುವ ಮೊಬೈಲ್ ಸಂಖ್ಯೆ ಇದ್ದರಷ್ಟೇ ಲಾಗಿನ್ ಸಾಧ್ಯವಾಗುವಂತೆ ಚುನಾವಣಾ ಆಯೋಗವು ಬದಲಾವಣೆ ಮಾಡಿದೆ. ಜತೆಗೆ ಒಂದು ಲಾಗಿನ್‌ನಿಂದ ಹಲವು ಅರ್ಜಿಗಳನ್ನು ಸಲ್ಲಿಸಲು ಇದ್ದ ಅವಕಾಶವನ್ನು ಮಿತಿಗೊಳಿಸಿದೆ.
ಆಳಂದ ಕ್ಷೇತ್ರದಲ್ಲಿ ಅಕ್ರಮವಾಗಿ 6,000ಕ್ಕೂ ಹೆಚ್ಚು ಮತದಾರರ ಚೀಟಿಗಳನ್ನು ರದ್ದುಪಡಿಸಲು ಯತ್ನಿಸಲಾಗಿತ್ತು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೆಪ್ಟೆಂಬರ್ 18ರಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು. ಮತಕಳವು ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿ ರಾಜ್ಯ ಸರ್ಕಾರವು ಸೆಪ್ಟೆಂಬರ್ 20ರಂದು ಆದೇಶಿಸಿತ್ತು. ಸೆಪ್ಟೆಂಬರ್ 24ರಂದು ಆಯೋಗವು ಈ ಬದಲಾವಣೆಗಳನ್ನು ಜಾರಿಗೆ ತಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.