ADVERTISEMENT

ಕೋವಿಡ್‌: ಪಶ್ಚಿಮ ಬಂಗಾಳದಲ್ಲಿ ಪ್ರಚಾರ ರ್‍ಯಾಲಿಗಳಿಗೆ ಚುನಾವಣಾ ಆಯೋಗ ನಿರ್ಬಂಧ

ಏಜೆನ್ಸೀಸ್
Published 22 ಏಪ್ರಿಲ್ 2021, 16:51 IST
Last Updated 22 ಏಪ್ರಿಲ್ 2021, 16:51 IST
ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಭಾಗಿಯಾಗಲು ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಸಿಎಂ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಭಾಗಿಯಾಗಲು ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಸಿಎಂ ಮಮತಾ ಬ್ಯಾನರ್ಜಿ   

ನವದೆಹಲಿ: ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರಕ್ಕೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ. ರೋಡ್‌ ಶೋ, ಸೈಕಲ್‌, ಬೈಕ್‌ ಹಾಗೂ ವಾಹನಗಳ ರ್‍ಯಾಲಿಗಳಿಗೆ ನೀಡಿದ್ದ ಅನುಮತಿಯನ್ನು ಗುರುವಾರ ಹಿಂಪಡೆದಿದೆ.

ಹಲವು ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಸಾರ್ವಜನಿಕ ಸಮಾವೇಶಗಳಲ್ಲಿ ನಿಗದಿತ ಸುರಕ್ಷತ ಕ್ರಮಗಳನ್ನು ಅನುಸರಿಸದೇ ಇರುವ ಬಗ್ಗೆ ಚುನಾವಣಾ ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿದೆ.

ಚುನಾವಣಾ ಆಯೋಗದ ಆದೇಶದ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಪಾದ ಯಾತ್ರೆ, ರೋಡ್‌ ಶೋ, ಬೈಕ್, ಸೈಕಲ್ ಸೇರಿದಂತೆ ವಾಹನಗಳ ರ್‍ಯಾಲಿಗಳಿಗೆ ಅನುಮತಿ ಇರುವುದಿಲ್ಲ. ಈಗಾಗಲೇ ನೀಡಿರುವ ಅನುಮತಿಗಳನ್ನು ಹಿಂಪಡೆಯಲಾಗಿರುತ್ತದೆ ಎಂದು ಪ್ರಕಟಿಸಿದೆ.

ADVERTISEMENT

ಸಾರ್ವಜನಿಕ ಸಭೆಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವಷ್ಟು ಸ್ಥಳಾವಕಾಶವಿರಬೇಕು, ಕೋವಿಡ್‌–19 ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಬೇಕು ಹಾಗೂ ಸಭೆಗೆ 500ಕ್ಕಿಂತ ಹೆಚ್ಚು ಜನರು ಸೇರಲು ಅವಕಾಶವಿರುವುದಿಲ್ಲ.

ಚುನಾವಣಾ ಆರೋಗದ ಆದೇಶಗಳು ಗುರುವಾರ ಸಂಜೆ 7ರಿಂದಲೇ ಜಾರಿಯಾಗಿವೆ.

ಸಿಎಂ ಮಮತಾ ಬ್ಯಾನರ್ಜಿ ಎಲ್ಲ ಭೌತಿಕ ಪ್ರಚಾರ ಸಭೆಗಳನ್ನು ರದ್ದುಗೊಳಿಸಿದ್ದು, ವರ್ಚುವಲ್‌ ಆಗಿ ಜನರ ಮುಂದೆ ಬರುವುದಾಗಿ ತಿಳಿಸಿದ್ದಾರೆ. ಕೋವಿಡ್‌–19 ಪ್ರಕರಣಗಳಲ್ಲಿ ಹೆಚ್ಚಳ ಹಾಗೂ ಚುನಾವಣಾ ಆಯೋಗದ ಆದೇಶದ ಬೆನ್ನಲ್ಲೇ ಈ ನಿರ್ಧಾರ ಪ್ರಕಟಿಸಿದ್ದಾರೆ.

ಗುರುವಾರ ಪಶ್ಚಿಮ ಬಂಗಾಳದಲ್ಲಿ ನಡೆದ ಆರನೇ ಹಂತದ ಚುನಾವಣೆಯಲ್ಲಿ ಸಂಜೆ 5ರ ವರೆಗೂ ಶೇ 79.09ರಷ್ಟು ಮತದಾನ ದಾಖಲಾಗಿದೆ.

18 ವರ್ಷಕ್ಕೂ ಮೇಲ್ಪಟ್ಟವರಿಗೆ ಮೇ 5ರಿಂದ ಉಚಿತವಾಗಿ ಕೋವಿಡ್‌ ಲಸಿಕೆ ಹಾಕಲಾಗುತ್ತದೆ ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮಮತಾ ಬ್ಯಾನರ್ಜಿ ಅವರನ್ನು ಟ್ಯಾಗ್‌ ಮಾಡಿ ಟ್ವೀಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.