
ಕಾಂಗ್ರೆಸ್ ಹಾಗೂ ಬಿಜೆಪಿ ಧ್ವಜಗಳು
ನವದೆಹಲಿ: ಕಾಂಗ್ರೆಸ್ ಸೇರಿದಂತೆ ಹಲವು ಪ್ರಮುಖ ರಾಜಕೀಯ ಪಕ್ಷಗಳು 2023–24ನೇ ಸಾಲಿನಲ್ಲಿ ಪಡೆದಿದ್ದಕ್ಕಿಂತಲೂ ಕಡಿಮೆ ದೇಣಿಗೆಯನ್ನು 2024–25ರಲ್ಲಿ ಪಡೆದುಕೊಂಡಿವೆ. ಆದರೆ, ಆಡಳಿತಾರೂಢ ಪಕ್ಷವಾಗಿರುವ ಬಿಜೆಪಿ ಇದೇ ಅವಧಿಯಲ್ಲಿ ಕಳೆದ ವರ್ಷಕ್ಕಿಂತಲೂ ಶೇ53ರಷ್ಟು ಹೆಚ್ಚು ದೇಣಿಗೆ ಪಡೆದಿದೆ.
ದೇಣಿಗೆ ಸಂಗ್ರಹ ಮತ್ತು ಲೆಕ್ಕ ಪರಿಶೋಧನಾ ವರದಿಯನ್ನು ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ. ಆ ಪ್ರಕಾರ, 2024ರ ಲೋಕಸಭಾ ಚುನಾವಣೆ ಸಮೀಪದಲ್ಲೇ ಅಂದರೆ, 2023–24ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕ ಹಾಗೂ 2024–25ರ ಮೊದಲ ತ್ರೈಮಾಸಿಕದ ಅವಧಿಯಲ್ಲಿ ರಾಜಕೀಯ ಪಕ್ಷಗಳು ಹೆಚ್ಚು ದೇಣಿಗೆ ಪಡೆದಿರುವುದು ವರದಿಯಾಗಿದೆ.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ವೈಎಸ್‌ಆರ್ ಕಾಂಗ್ರೆಸ್, ಬಿಜೆಡಿ, ಟಿಡಿಪಿ ಹಾಗೂ ಬಿಆರ್‌ಎಸ್ ಪಕ್ಷಗಳ ದೇಣಿಗೆ ಸಂಗ್ರಹದಲ್ಲಿ ಇಳಿಕೆ ದಾಖಲಾಗಿದೆ. ಇತ್ತ ಬಿಜೆಪಿ, ಜೆಡಿ(ಯು), ಸಮಾಜವಾದಿ ಪಕ್ಷ, ಸಿಪಿಐ (ಎಂಎಲ್) ಸೇರಿ ಇನ್ನೂ ಕೆಲವು ಪಕ್ಷಗಳ ದೇಣಿಗೆ ಹೆಚ್ಚಳವಾಗಿದೆ.
ಕಾಂಗ್ರೆಸ್‌ಗೆ ದೊರೆತಿರುವ ದೇಣಿಗೆಗಿಂತಲೂ ಬಿಜೆಪಿ ಪಡೆದಿರುವ ದೇಣಿಗೆ 12 ಪಟ್ಟು ಹೆಚ್ಚಾಗಿದೆ. ಕಾಂಗ್ರೆಸ್ ಪಡೆದ ಒಟ್ಟು ದೇಣಿಗೆಯಲ್ಲಿ ರಾಹುಲ್ ಗಾಂಧಿ ಅವರು ಪಕ್ಷಕ್ಕೆ ನೀಡಿದ ₹2.30 ಲಕ್ಷ, ಪಿ. ಚಿದಂಬರಂ ಕೊಟ್ಟ ₹3 ಕೋಟಿ, ಪ್ರಿಯಾಂಕಾ ಗಾಂಧಿ ವಾದ್ರಾ ನೀಡಿರುವ ₹2.30 ಲಕ್ಷ, ಕೆ.ಸಿ. ವೇಣುಗೋಪಾಲ್ ಅವರು ನೀಡಿದ ₹1.90 ಲಕ್ಷವೂ ಸೇರಿದೆ.
ಏತನ್ಮಧ್ಯೆ, ಬಿಜೆಪಿ ಸಲ್ಲಿಸಿರುವ ವರದಿ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಾಗುತ್ತಿಲ್ಲ ಎನ್ನಲಾಗಿದೆ.
ಚುನಾವಣಾ ವೆಚ್ಚ
ವರದಿಗಳ ಪ್ರಕಾರ, ಕಾಂಗ್ರೆಸ್ ಪಕ್ಷವು 2024–25ರಲ್ಲಿ 1,111.94 ಕೋಟಿ ವೆಚ್ಚ ಮಾಡಿದೆ. ಈ ಪೈಕಿ 896.22 ಕೋಟಿ ಚುನಾವಣೆಗಾಗಿ ಮಾಡಿದ ವೆಚ್ಚ ಎನ್ನಲಾಗಿದೆ. ಟಿಎಂಸಿ 137.58 ಕೋಟಿ, ವೈಎಸ್‌ಆರ್‌ಸಿ 229.92, ಸಿಪಿಐ (ಎಂಎಲ್)ಎಲ್ ಪಕ್ಷವು 1.69 ಕೋಟಿಯನ್ನು ಚುನಾವಣೆಗಾಗಿ ವೆಚ್ಚ ಮಾಡಿವೆ. ಬಿಜೆಪಿಯು 270.66 ಕೋಟಿಯನ್ನು ಚುನಾವಣೆಗಾಗಿ ಬಳಸಿದೆ. ಈ ಪೈಕಿ 6.02 ಕೋಟಿ ಚುನಾವಣಾ ಪೂರ್ವ ಸಮೀಕ್ಷೆ, 2.25 ಕೋಟಿ ಚುನಾವಣಾ ನಂತರದ ಸಮೀಕ್ಷೆಗೆ ಬಳಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.