ADVERTISEMENT

ನವದೆಹಲಿ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ: ಮತ ಕಳ್ಳತನ ಮುಚ್ಚಿಹಾಕಲು ಪ್ರಯತ್ನ -AAP

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 14:38 IST
Last Updated 20 ಸೆಪ್ಟೆಂಬರ್ 2025, 14:38 IST
ಎಎಪಿ 
ಎಎಪಿ    

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ‘ಮತ ಕಳ್ಳತನ’ ನಡೆದಿದೆ ಎಂಬ ಆರೋಪವನ್ನು ಎಎಪಿ ಶನಿವಾರ ಪುನರುಚ್ಚರಿಸಿದ್ದು, ಚುನಾವಣಾ ಆಯೋಗವು (ಇ.ಸಿ) ಎಲ್ಲ ಅಕ್ರಮಗಳನ್ನು ಮುಚ್ಚಿಹಾಕುತ್ತಿದೆ ಎಂದು ದೂರಿದೆ.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ದೆಹಲಿ ಘಟಕದ ಅಧ್ಯಕ್ಷ ಸೌರಭ್‌ ಭಾರದ್ವಾಜ್, ‘ವಿಧಾನಸಭಾ ಚುನಾವಣೆಯಲ್ಲಿ ನವದೆಹಲಿ ಕ್ಷೇತ್ರದಲ್ಲಿ ‘ಮತ ಕಳ್ಳತನ’ ನಡೆದಿರುವ ಅನುಮಾನ ವ್ಯಕ್ತವಾಗಿದೆ’ ಎಂದಿದ್ದಾರೆ.

ಫೆಬ್ರುವರಿಯಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಎಎಪಿಯ ಅರವಿಂದ ಕೇಜ್ರಿವಾಲ್, ಬಿಜೆಪಿಯ ಪರ್ವೇಶ್ ಸಾಹಿಬ್‌ ಸಿಂಗ್‌ ವರ್ಮಾ ಮತ್ತು ಕಾಂಗ್ರೆಸ್‌ನ ಸಂದೀಪ್‌ ದೀಕ್ಷಿತ್‌ ಸ್ಪರ್ಧಿಸಿದ್ದರು.

ADVERTISEMENT

‘ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರು ಅಳಿಸಿ ಹಾಕಿರುವ ಆರೋಪಗಳ ತನಿಖೆಗೆ ಒತ್ತಾಯಿಸಿ ನಾವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ. ಆದರೆ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಕೋರಿರುವ ಮಾಹಿತಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ್ದಲ್ಲ ಎನ್ನುವ ಮೂಲಕ ಆಯೋಗವು ಪ್ರತಿಕ್ರಿಯಿಸಲು ನಿರಾಕರಿಸಿದೆ’ ಎಂದಿದ್ದಾರೆ.

‘ಮುಖ್ಯ ಚುನಾವಣಾ ಆಯುಕ್ತರ ನಡೆ ಅನುಮಾನಾಸ್ಪದವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಆಯೋಗವು ಮತ ​​ಕಳ್ಳತನವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

ದೆಹಲಿಯ ಮಾಜಿ ಮುಖ್ಯಮಂತ್ರಿಗಳಾದ ಅರವಿಂದ ಕೇಜ್ರಿವಾಲ್‌ ಮತ್ತು ಆತಿಶಿ ಅವರು ಬರೆದಿರುವ ಪತ್ರಕ್ಕೆ ಆಯೋಗವು ಯಾವುದೇ ಉತ್ತರ ನೀಡಿಲ್ಲ ಎಂದು ಎಎಪಿ ಶುಕ್ರವಾರ ಆರೋಪಿಸಿತ್ತು. ಅದರೆ ಎಎಪಿ ಆರೋಪ ಅಲ್ಲಗಳೆದಿರುವ ಇ.ಸಿ, ‘ಆತಿಶಿ ಅವರು ಬರೆದ ಪತ್ರಕ್ಕೆ ಆಯೋಗವು ಈಗಾಗಲೇ 76 ಪುಟಗಳ ಉತ್ತರ ನೀಡಿದೆ’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.