ADVERTISEMENT

PV Web Exclusive | ‘ಹಲೋ ವೋಟರ್ಸ್‌’ ವೆಬ್‌ ರೇಡಿಯೋ ಇಂದಿನಿಂದ

ಜ.25 ರಾಷ್ಟ್ರೀಯ ಮತದಾರರ ದಿನ; ಚುನಾವಣಾ ಆಯೋಗದ ಪ್ರಯತ್ನ

ಕೆ.ನರಸಿಂಹ ಮೂರ್ತಿ
Published 25 ಜನವರಿ 2021, 2:11 IST
Last Updated 25 ಜನವರಿ 2021, 2:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಳ್ಳಾರಿ: ರಾಷ್ಟ್ರೀಯ ಮತದಾರರ ದಿನಾಚರಣೆ ದಶಕ ಪೂರೈಸುತ್ತಿರುವ ಹೊತ್ತಿನಲ್ಲಿ ಕೇಂದ್ರ ಚುನಾವಣಾ ಆಯೋಗವು ಜ.25ರಿಂದ ವೆಬ್‌ ರೇಡಿಯೋ ‘ಹಲೋ ವೋಟರ್ಸ್‌’ ಆರಂಭಿಸುತ್ತಿದೆ.

11ನೇ ದಿನಾಚರಣೆಯ ಪ್ರಯುಕ್ತ ನವದೆಹಲಿಯಲ್ಲಿ ಸೋಮವಾರ ನಡೆಯಲಿರುವ ಕಾರ್ಯಕ್ರಮದಲ್ಲಿ, ಉತ್ತಮ ರೀತಿಯಲ್ಲಿ ಚುನಾವಣೆಗಳನ್ನು ನಡೆಸಿದ ಅಧಿಕಾರಿ–ಸಿಬ್ಬಂದಿಗೆ ರಾಷ್ಟ್ರಪ್ರಶಸ್ತಿ ಪ್ರದಾನ ಮಾಡಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್‌ ರೇಡಿಯೋಗೂ ಚಾಲನೆ ನೀಡಲಿದ್ದಾರೆ.

ಜನಪ್ರಿಯವಾಗಿರುವ ಎಫ್‌ಎಂ ರೇಡಿಯೋ ಮಾದರಿಯಲ್ಲೇ ಕಾರ್ಯನಿರ್ವಹಿಸುವ ಈ ಆನ್‌ಲೈನ್‌ ಡಿಜಿಟಲ್‌ ರೇಡಿಯೋ ಮತದಾರರಲ್ಲಿ ಜಾಗೃತಿ ಮೂಡಿಸಲೆಂದೇ ರೂಪುಗೊಂಡಿದೆ. ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ಬಿತ್ತರಗೊಳ್ಳಲಿವೆ. ಆಸಕ್ತರು ಈ ರೇಡಿಯೋದ ಲಿಂಕ್‌ ನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪಡೆದುಕೊಳ್ಳಬಹುದು.

ADVERTISEMENT

ಏನೇನು?: ಚುನಾವಣಾ ಪ್ರಕ್ರಿಯೆಯ ಕುರಿತು ಜಾಗೃತಿ ಮೂಡಿಸುವ ಹಾಡುಗಳು, ನಾಟಕ, ಚರ್ಚೆ, ಚುನಾವಣೆ ಕಥೆಗಳು ರೇಡಿಯೋದಲ್ಲಿ ಹಿಂದಿ, ಇಂಗ್ಲಿಷ್‌ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರವಾಗಲಿವೆ.

2011ರಿಂದ: 1950ರ ಜನವರಿ 25ರಂದು ಚುನಾವಣಾ ಆಯೋಗ ಸ್ಥಾಪನೆಯಾದ ನೆನಪಿಗಾಗಿ, 2011ರಿಂದ ಮತದಾರರ ದಿನಾಚರಣೆಯನ್ನು ದೇಶದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ದಶಕ ಪೂರೈಸಿ 11ನೇ ದಿನಾಚರಣೆಯತ್ತ ಆಯೋಗ ಸಾಗಿರುವ ಹೊತ್ತಿನಲ್ಲಿ ಚುನಾವಣೆ ಜಾಗೃತಿ ಸಲುವಾಗಿ ಆಯೋಗವು ನವ ಸಾಮಾಜಿಕ ಮಾಧ್ಯಮಗಳತ್ತ ಹೊರಳಿಕೊಂಡಿರುವುದು ವಿಶೇಷ.

ಕೋವಿಡ್‌ ಕಾಲಘಟ್ಟದಲ್ಲಿ ಯಶಸ್ವಿಯಾಗಿ ನಡೆದ ಚುನಾವಣೆಗಳ ಕುರಿತ ‘ಎ ಫೋಟೋ ಜರ್ನಿ’ ಫೋಟೋಗಳ ಸಂಕಲನವನ್ನೂ ಆಯೋಗ ಬಿಡುಗಡೆ ಮಾಡಲಿರುವುದು ವಿಶೇಷ.

ಇ–ಮತದಾರರ ಪತ್ರ: ವೋಟರ್‌ ಹೆಲ್ಪ್‌ಲೈನ್‌ ಆಪ್‌ ಮೂಲಕ ಇ ಮತದಾರರ ಪತ್ರವನ್ನು ಪಡೆದುಕೊಳ್ಳುವ ವ್ಯವಸ್ಥೆಗೂ ಇದೇ ಸಂದರ್ಭದಲ್ಲಿ ಚಾಲನೆ ದೊರಕಲಿದೆ. e-epic ಎಂದು ಕರೆಯಲಾದ ಇದು ಮತದಾರರ ಡಿಜಿಟಲ್‌ ಗುರುತಿನ ಪತ್ರ.

’ಕೋವಿಡ್‌ ಕಾಲಘಟ್ಟದಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯಿತು. ಅದಕ್ಕಿಂತ ಮುಂಚೆ ರಾಜ್ಯಸಭೆ ಚುನಾವಣೆ ನಡೆದಿತ್ತು. ದೇಶದ ವಿವಿಧೆಡೆ 60 ಕ್ಷೇತ್ರಗಳಲ್ಲಿ ಉಪಚುನಾವಣೆಗಳೂ ನಡೆದಿದ್ದವು’ ಎಂದು ಆಯೋಗ ತನ್ನ ವೆಬ್‌ಸೈಟ್‌ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

2019ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ನಡೆಸಿದ ಸ್ವೀಪ್‌ ಚಟುವಟಿಕೆಗಳ ಕುರಿತ ಪುಸ್ತಕವನ್ನೂ ಆಯೋಗ ಇದೇ ಸಂದರ್ಭದಲ್ಲಿ ಸಿದ್ಧಪಡಿಸಿದೆ.

ಕಾಮಿಕ್‌ ಬುಕ್‌: ಚಲೋ ಕರೆ ಮತದಾನ್‌ (ಬನ್ನಿಮತದಾನ ಮಾಡೋಣ) ಎಂಬ ಕಾಮಿಕ್‌ ಪುಸ್ತಕವನ್ನೂ ಆಯೋಗ ಬಿಡುಗಡೆ ಮಾಡಲಿದೆ. ಹೊಸ ಮತ್ತು ಯುವ ಮತದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಬಹಳ ತಮಾಷೆಯ ಧಾಟಿಯಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ವಿಶೇಷ ಪ್ರಯತ್ನ ಇದು ಎಂಬುದು ಆಯೋಗದ ಅಭಿಮತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.