ಲಖನೌ(ಉತ್ತರ ಪ್ರದೇಶ): ‘ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಬದಲು ಮತ ಪತ್ರಗಳ(ಬ್ಯಾಲೆಟ್ ಪೇಪರ್) ಮೂಲಕ ಚುನಾವಣೆ ನಡೆದರೆ ಬಿಎಸ್‌ಪಿಯು ಕಳೆದುಹೋದ ತನ್ನ ರಾಜಕೀಯ ನೆಲೆಯನ್ನು ಮತ್ತೆ ಪಡೆಯಲಿದೆ’ ಎಂದು ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್‌ಪಿ ಅಭ್ಯರ್ಥಿಗಳು ಗೆಲ್ಲದಂತೆ ತಡೆಯಲು ಇವಿಎಂಗಳನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿದರು.
‘ಚುನಾವಣೆಗಳು ದೊಡ್ಡದಾಗಿರಲಿ, ಚಿಕ್ಕದಾಗಿರಲಿ ಹಿಂದಿನಂತೆ ಬ್ಯಾಲೆಟ್ ಪೇಪರ್‌ಗಳ ಮೂಲಕವೇ ಮತದಾನ ನಡೆಸುವಂತೆ ಬಿಎಸ್‌ಪಿ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ’ ಎಂದು ಹೇಳಿದರು.
‘ಇವಿಎಂಗಳನ್ನು ಬಳಸಿಕೊಂಡು ಬಿಎಸ್‌ಪಿ ಅಭ್ಯರ್ಥಿಗಳನ್ನು ಸೋಲಿಸಲಾಗುತ್ತಿದೆ. ಆ ಮೂಲಕ ಬಿಎಸ್‌ಪಿ ಪಕ್ಷದ ಮೇಲೆ ದಲಿತ ಮತ್ತು ವಂಚಿತ ವರ್ಗದ ಮತದಾರರಲ್ಲಿ ನಂಬಿಕೆ ಮುರಿಯುವ ಕೆಲಸ ನಡೆಯುತ್ತಿದೆ’ ಎಂದರು.
‘ಈಗಿನ ಸರ್ಕಾರ ಈ ಕೆಲಸ ಮಾಡದಿದ್ದರೂ, ಮುಂದೆ ಅಧಿಕಾರಕ್ಕೆ ಬರುವ ಸರ್ಕಾರ(ಬಿಜೆಪಿಯೇತರ) ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲಿದೆ ಎಂದು ಭಾವಿಸುತ್ತೇನೆ’ ಎಂದು ಹೇಳಿದರು.
‘ಚುನಾವಣಾ ಪ್ರಕ್ರಿಯೆಯು ಮತ್ತೆ ಬ್ಯಾಲೆಟ್ ಪೇಪರ್‌ಗಳಿಗೆ ಬದಲಾದರೆ ಬಿಎಸ್‌ಪಿ ತನ್ನ ಕಳೆದುಹೋದ ರಾಜಕೀಯ ನೆಲೆಯನ್ನು ಮರಳಿ ಪಡೆಯುತ್ತದೆ ಮತ್ತು ಅದರ ಒಳ್ಳೆಯ ದಿನಗಳು ಮರಳುತ್ತವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.