
ನಗಾಂವ್/ಗುವಾಹಟಿ: ಅಸ್ಸಾಂನ ಹೋಜಾಯಿ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಸಾಯಿರಂಗ್–ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ಏಳು ಆನೆಗಳು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ರಾತ್ರಿ 2.17ರ ಸುಮಾರಿಗೆ ಘಟನೆ ನಡೆದಿದೆ. ದಟ್ಟ ಮಂಜು ಆವರಿಸಿದ್ದರಿಂದ ಲೊಕೊ ಪೈಲಟ್‌ಗೆ ದೂರದಿಂದ ಆನೆ ಹಿಂಡು ಕಾಣಿಸಲಿಲ್ಲ. ರೈಲಿಗೆ ತೀರಾ ಸಮೀಪದಲ್ಲಿ ಆನೆಗಳನ್ನು ನೋಡಿದ ಲೊಕೊ ಪೈಲಟ್ ತಕ್ಷಣವೇ ಬ್ರೇಕ್ ಹಾಕಿದರೂ ಅಷ್ಟರಲ್ಲಾಗಲೇ ಅವಘಡ ಸಂಭವಿಸಿತ್ತು. ಹಿಂಡಿನಲ್ಲಿದ್ದ ಒಂದು ಆನೆ ಗಂಭೀರ ಗಾಯಗಳೊಂದಿಗೆ ಬದುಕುಳಿದಿದೆ. ರೈಲಿನ ಎಂಜಿನ್ ಒಳಗೊಂಡು ಐದು ಬೋಗಿಗಳು ಹಳಿ ತಪ್ಪಿವೆ.
ಘಟನೆಯ ಬೆನ್ನಲ್ಲೇ, ಈ ಮಾರ್ಗದಲ್ಲಿ 9 ರೈಲುಗಳ ಸಂಚಾರವನ್ನು ರದ್ದುಪಡಿಸಲಾಯಿತು. ತಿನ್ಸುಕಿಯಾ–ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಸೇರಿದಂತೆ 13 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಯಿತು.
ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಹಾಗೂ ವನ್ಯಜೀವಿ ಕಾರಿಡಾರ್‌ಗಳಲ್ಲಿ ಸುರಕ್ಷತೆಗೆ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.
‘ಹೋಜಾಯಿ ಜಿಲ್ಲೆಯ ಚಂಗೊರಿ ಗ್ರಾಮದ ಸಮೀಪ ದುರ್ಘಟನೆ ಸಂಭವಿಸಿದೆ. ಈ ಪ್ರದೇಶದಲ್ಲಿ ದಟ್ಟ ಮಂಜು ಆವರಿಸಿತ್ತು, ಇದೇ ಈ ಅವಘಡಕ್ಕೆ ಕಾರಣವಾಗಿರಬಹುದು’ ಎಂದು ನಗಾಂವ್ ವಿಭಾಗೀಯ ಅರಣ್ಯ ಅಧಿಕಾರಿ ಸುಹಾಸ್ ಕದಂ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘ಪಶುವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಘಟನೆ ನಡೆದ ಸ್ಥಳದ ಸಮೀಪದಲ್ಲೇ ಮೃತಪಟ್ಟ ಆನೆಗಳ ಅಂತ್ಯಸಂಸ್ಕಾರ ನೆರವೇರಿಸಲಾಗುವುದು. ಗಾಯಗೊಂಡಿರುವ ಇನ್ನೊಂದು ಆನೆಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಸುಹಾಸ್ ಹೇಳಿದ್ದಾರೆ.
ಘಟನೆ ನಡೆದ ಸ್ಥಳದಿಂದ ಭಾನುವಾರ ಬೆಳಿಗ್ಗೆ 6.11ಕ್ಕೆ ಗುವಾಹಟಿಯತ್ತ ರೈಲು ಸಂಚಾರ ಪುನರಾರಂಭಗೊಂಡಿತು. ಹಳಿ ತಪ್ಪಿದ ಬೋಗಿಗಳಲ್ಲಿ ಇದ್ದ ಪ್ರಯಾಣಿಕರಿಗೆ, ರಾಜಧಾನಿ ಎಕ್ಸ್‌ಪ್ರೆಸ್‌ನ ಇತರೆ ಬೋಗಿಗಳಲ್ಲಿ ಅವಕಾಶ ಕಲ್ಪಿಸಲಾಯಿತು. ಗುವಾಹಟಿಯಲ್ಲಿ ಹೆಚ್ಚುವರಿ ಬೋಗಿ ಅಳವಡಿಸಿ, ನವದೆಹಲಿಯತ್ತ ಪ್ರಯಾಣ ಮುಂದುವರಿಸಲು ಅವಕಾಶ ಮಾಡಿಕೊಡಲಾಯಿತು ಎಂದು ಈಶಾನ್ಯ ಗಡಿ ರೈಲ್ವೆ ಪ್ರಕಟಣೆ ತಿಳಿಸಿದೆ.
ಸಾಯಿರಂಗ್–ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು, ಮಿಜೋರಾಂನ ಸಾಯಿರಂಗ್‌ನಿಂದ ದೆಹಲಿಯ ಆನಂದ್ ವಿಹಾರ್ ಟರ್ಮಿನಲ್ ಅನ್ನು ಸಂಪರ್ಕಿಸುತ್ತದೆ.
ಘಟನೆ ವಿವರ
ಎಲ್ಲಿ: ಗುವಾಹಟಿಯಿಂದ 126 ಕಿ.ಮೀ ದೂರದಲ್ಲಿರುವ ಈಶಾನ್ಯ ಗಡಿ ರೈಲ್ವೆಯ ಲುಮ್ಡಿಂಗ್ ವಲಯದ ಜಮುನಾಮುಖ್–ಕಾಂಪುರ ವಿಭಾಗದ ಚಂಗೊರಿ ಗ್ರಾಮದ ಸಮೀಪ
ಹೇಗೆ: ದಟ್ಟ ಮಂಜು ಕವಿದಿದ್ದರಿಂದ ಲೊಕೊ ಪೈಲಟ್‌ಗೆ ಆನೆ ಹಿಂಡು ಕಾಣಿಸದೆ ಅವಘಡ
ಯಾವಾಗ: ಶನಿವಾರ ತಡರಾತ್ರಿ 2.17ರ ಸುಮಾರಿಗೆ
ಹಾನಿ: 7 ಆನೆಗಳ ಸಾವು; ಒಂದು ಆನೆ ಗಂಭೀರ, ಹಳಿ ತಪ್ಪಿದ 5 ಬೋಗಿ
ರೈಲು ಡಿಕ್ಕಿ ಹೊಡೆದು ನಾಲ್ಕು ಮರಿಯಾನೆಗಳು ಸೇರಿ ಏಳು ಆನೆಗಳು ಮೃತಪಟ್ಟಿರುವುದು ನೋವಿನ ಸಂಗತಿ. ಘಟನೆ ಕುರಿತು ಸಮಗ್ರ ತನಿಖೆ ನಡೆಸಲು ಅರಣ್ಯ ಇಲಾಖೆಗೆ ಆದೇಶಿಸಿದ್ದೇನೆ.– ಹಿಮಂತ ಬಿಸ್ವಾ ಶರ್ಮಾ ಅಸ್ಸಾಂ ಮುಖ್ಯಮಂತ್ರಿ (‘ಎಕ್ಸ್’ ಪೋಸ್ಟ್‌ನಲ್ಲಿ)
ಅಪಘಾತ ಸಂಭವಿಸಿದ ಸ್ಥಳವು ಆನೆ ಕಾರಿಡಾರ್ ವ್ಯಾಪ್ತಿಗೆ ಸೇರುವುದಿಲ್ಲ. ಆನೆ ಹಿಂಡನ್ನು ನೋಡಿದ ಕೂಡಲೇ ಲೊಕೊ ಪೈಲಟ್ ತುರ್ತು ಬ್ರೇಕ್ ಹಾಕಿದ್ದಾರೆ. ಆದರೂ ದುರ್ಘಟನೆ ಸಂಭವಿಸಿದೆಕಪಿಂಜಲ್ ಕಿಶೋರ್ ಶರ್ಮಾ ಈಶಾನ್ಯ ಗಡಿ ರೈಲ್ವೆ (ಎನ್‌ಎಫ್‌ಆರ್) ವಕ್ತಾರ
ರಾಜ್ಯದಲ್ಲಿ ಮಾನವ–ವನ್ಯಜೀವಿ ಸಂಘರ್ಷದ ಸವಾಲು ಹೆಚ್ಚುತ್ತಿರುವುದನ್ನು ಈ ಘಟನೆ ಒತ್ತಿ ಹೇಳಿದೆ. ನೈಸರ್ಗಿಕ ಆವಾಸ ಸ್ಥಾನ ಕಡಿಮೆಯಾಗುತ್ತಿರುವುದು ಕಳವಳಕಾರಿ–ಗೌರವ್ ಗೊಗೊಯಿ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.