ಆನೆ
(ಐಸ್ಟೋಕ್ ಚಿತ್ರ)
ಮಲಪ್ಪುರಂ (ಕೇರಳ): ಜಿಲ್ಲೆಯ ಉರಂಗಟ್ಟಿರಿಯಲ್ಲಿ ಆನೆಯೊಂದು ಬಾವಿಗೆ ಬಿದ್ದಿದೆ. ಅದನ್ನು ರಕ್ಷಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗೆ ಸ್ಥಳೀಯರಿಂದಲೇ ತೊಡಕು ಎದುರಾಗಿದೆ.
‘ರಕ್ಷಣೆ ಬಳಿಕ ಆನೆಯನ್ನು ಇಲ್ಲಿಯೇ ಬಿಡಬಾರದು. ಈ ಬಗ್ಗೆ ಸ್ಪಷ್ಟ ಭರವಸೆ ನೀಡದೇ ರಕ್ಷಣೆಗೆ ಅವಕಾಶ ನೀಡೆವು’ ಎಂದು ಬಾವಿಯುಳ್ಳ ಭೂಮಿ ಮಾಲೀಕ, ಸ್ಥಳೀಯರು ಪಟ್ಟುಹಿಡಿದಿದ್ದಾರೆ.
ನಿಲಾಂಬುರ್ ವಲಯದ ಡಿಎಫ್‌ಒ ಅವರಿಗೆ ಈ ಕುರಿತು ಅಹವಾಲು ಸಲ್ಲಿಸಿರುವ ಸ್ಥಳೀಯರು, ‘ಆನೆಯ ನಿರಂತರ ದಾಳಿಯಿಂದ ಬೆಳೆಗಳು ಹಾಳಾಗಿವೆ. ನಷ್ಟ ಭರಿಸಬೇಕು’ ಎಂದೂ ಒತ್ತಾಯಿಸಿದರು.
ಬಾವಿಗೆ ಬಿದ್ದಿರುವ ಆನೆಯನ್ನು ರಕ್ಷಿಸಿದ ಬಳಿಕ ದಟ್ಟಕಾಡಿಗೆ ಬಿಡಿ ಎಂದು ಸ್ಥಳೀಯರು ಆಗ್ರಹಪಡಿಸಿದ್ದಾರೆ. ಆದರೆ, ‘ಆನೆ ರಕ್ಷಣೆ, ಸ್ಥಳಾಂತರ ಸುಲಭವಲ್ಲ’ ಎಂದು ಡಿಎಫ್‌ಒ ಪ್ರತಿಕ್ರಿಯಿಸಿದ್ದಾರೆ.
‘ಬದಲಾಗಿ ಬಾವಿಯ ಒಂದು ಭಾಗವನ್ನು ಒಡೆದು, ಆನೆ ಸರಾಗವಾಗಿ ನಿರ್ಗಮಿಸುವಂತೆ ಮಾಡುವುದೇ ಪರಿಹಾರ’ ಎಂದು ಜನರ ಮನವೊಲಿಸಲು ಡಿಎಫ್‌ಒ ಯತ್ನಿಸಿದರು. ಆದರೆ, ‘ಆನೆ ಮತ್ತೆ, ಮತ್ತೆ ಬಂದು ಬೆಳೆಯನ್ನು ಹಾನಿ ಮಾಡಲಿದೆ. ದಟ್ಟಕಾಡಿಗೆ ಬಿಡುವುದಿದ್ದರೆ ರಕ್ಷಿಸಿ’ ಎಂದೂ ಜನರು ಒತ್ತಾಯಿಸಿದ್ದಾರೆ.
ಈ ಕುರಿತು ಸಂಬಂಧಿಸಿದವರ ಜೊತೆಗೆ ಚರ್ಚಿಸಿದ ನಂತರವಷ್ಟೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಿಎಫ್‌ಒ ಹೇಳಿದ್ದಾರೆ. ಆನೆ ಬಾವಿಯಲ್ಲೇ ಉಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.