ADVERTISEMENT

ಎಲ್ಗಾರ್ ಪರಿಷತ್ ಪ್ರಕರಣ: ಮಹೇಶ್‌ ರಾವುತ್‌ಗೆ ಮಧ್ಯಂತರ ಜಾಮೀನು ನೀಡಿದ ಕೋರ್ಟ್‌

ಪಿಟಿಐ
Published 16 ಸೆಪ್ಟೆಂಬರ್ 2025, 13:46 IST
Last Updated 16 ಸೆಪ್ಟೆಂಬರ್ 2025, 13:46 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಎಲ್ಗಾರ್ ಪರಿಷತ್– ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಹೋರಾಟಗಾರ ಮಹೇಶ್‌ ರಾವುತ್‌ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಬಾಂಬೆ ಹೈಕೋರ್ಟ್ ಜಾಮೀನು ನೀಡಿದ್ದರೂ, ರಾವುತ್‌ ಅವರ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠ ವಿಚಾರಣೆ ನಡೆಸಿತು.

ರಾವುತ್‌ ಅವರು ರೂಮಾಟಾಯ್ಡ್ ಸಂಧಿವಾತದಿಂದ ಬಳಲುತ್ತಿದ್ದಾರೆ ಎಂದು ಅವರ ಪರ ಹಿರಿಯ ವಕೀಲ ಸಿ.ಯು.ಸಿಂಗ್ ವಾದ ಮಂಡಿಸಿದರು.

ADVERTISEMENT

‘ವೈದ್ಯಕೀಯ ಕಾರಣಗಳನ್ನು ಆಧರಿಸಿ ರಾವುತ್‌ ಅವರಿಗೆ ಬಾಂಬೆ ಹೈಕೋರ್ಟ್ ಈಗಾಗಲೇ ಜಾಮೀನು ಮಂಜೂರು ಮಾಡಿದೆ. ನಾವು ಕೂಡಾ ರಾವುತ್‌ ಅವರಿಗೆ ಆರು ವಾರಗಳ ಕಾಲ ಜಾಮೀನು ನೀಡಲು ಇಚ್ಛಿಸಿದ್ದೇವೆ’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ರಾವುತ್‌ ಅವರಿಗೆ ಜಾಮೀನು ಮಂಜೂರು ಮಾಡಲು ಬಾಂಬೆ ಹೈಕೋರ್ಟ್ ಅನುಮತಿ ನೀಡಿತ್ತು. ಆದರೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮನವಿ ಮೇರೆಗೆ ತನ್ನದೇ ಆದ ಆದೇಶವನ್ನು ಒಂದು ವಾರ ತಡೆಹಿಡಿದಿತ್ತು.

2017ರ ಡಿಸೆಂಬರ್ 31ರಂದು ಪುಣೆಯಲ್ಲಿ ನಡೆದಿದ್ದ ಎಲ್ಗಾರ್ ಪರಿಷತ್‌ ಸಮ್ಮೇಳನದಲ್ಲಿ ರಾವುತ್‌ ಸೇರಿ ಅನೇಕರು ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದರ ಪರಿಣಾಮ ಮಾರನೇ ದಿನ ನಗರ ಹೊರವಲಯದ ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಹಿಂಸಾಚಾರ ನಡೆದಿತ್ತು.

ರಾವುತ್‌ ಅವರನ್ನು 2018ರ ಜೂನ್ 6ರಂದು ಬಂಧಿಸಿ ನವಿ ಮುಂಬೈನ ತಾಲೋಜ ಜೈಲಿನಲ್ಲಿ ಇರಿಸಲಾಗಿತ್ತು. ಪ್ರಕರಣ ಸಂಬಂಧ ರಾವುತ್‌ ಸೇರಿದಂತೆ 16 ಜನರನ್ನು ಪೊಲೀಸರು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.