ADVERTISEMENT

ತುರ್ತು ಸಂದರ್ಭದಲ್ಲಿ ಕೋವಿಡ್‌ ಲಸಿಕೆ ಬಳಕೆ ಬಗ್ಗೆ ನಿರ್ಧರಿಸಿಲ್ಲ: ಹರ್ಷವರ್ಧನ್‌

ಕ್ಲಿನಿಕಲ್‌ ಟ್ರಯಲ್‌ ಮಾಹಿತಿ ಆಧಾರದಲ್ಲಿ ನಿರ್ಧಾರ ಸಾಧ್ಯ: ಹರ್ಷವರ್ಧನ್‌

ಪಿಟಿಐ
Published 11 ಅಕ್ಟೋಬರ್ 2020, 12:59 IST
Last Updated 11 ಅಕ್ಟೋಬರ್ 2020, 12:59 IST
ಹರ್ಷವರ್ಧನ್‌
ಹರ್ಷವರ್ಧನ್‌   

ನವದೆಹಲಿ: ‘ಕೋವಿಡ್‌–19 ಲಸಿಕೆಯನ್ನು ತುರ್ತು ಸಂದರ್ಭಗಳಲ್ಲಿ ಬಳಸಲು ಅನುಮತಿ ನೀಡುವ ಸಂಬಂಧ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಭಾನುವಾರ ಹೇಳಿದ್ದಾರೆ.

‘ಸಾರ್ವಜನಿಕ ಬಳಕೆಗೆ ಈ ಲಸಿಕೆ ಯಾವಾಗ ಲಭ್ಯವಾಗುತ್ತದೆ ಎಂಬ ಮಾಹಿತಿಯೂ ಇಲ್ಲ. ಆದರೆ, ತುರ್ತು ಸಂದರ್ಭಗಳಲ್ಲಿ ಬಳಕೆಗೆ ಅನುಮತಿ ನೀಡುವ ಸಂಬಂಧ ನಿರ್ಧಾರ ಕೈಗೊಳ್ಳುವುದು ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ನ ಫಲಿತಾಂಶದ ಮೇಲೆ ಅವಲಂಬಿತವಾಗಿದೆ’ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿನ ತಮ್ಮ ಹಿಂಬಾಲಕರೊಂದಿಗೆ ನಡೆಸುವ ‘ಸಂಡೆ ಸಂವಾದ್‌‘ನ 5ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ‘ಕೋವಿಡ್‌–19 ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ ವಿವಿಧ ಹಂತಗಳಲ್ಲಿ ನಡೆಯುತ್ತಿದೆ. ಈ ಟ್ರಯಲ್‌ಗಳ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ‘ ಎಂದರು.

ADVERTISEMENT

‘ಲಸಿಕೆ ಎಷ್ಟು ಸುರಕ್ಷಿತ ಹಾಗೂ ಅದರ ಕಾರ್ಯಕ್ಷಮತೆ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಾದಾಗ ಮಾತ್ರ, ತುರ್ತು ಸನ್ನಿವೇಶಗಳಲ್ಲಿ ಅದರ ಬಳಕೆಗೆ ಅನುಮತಿ ನೀಡಲು ಸಾಧ್ಯವಾಗಲಿದೆ. ವಿವಿಧ ಬಗೆಯ ಲಸಿಕೆ ಲಭ್ಯತೆ ಬಗ್ಗೆಯೂ ಗಮನ ಹರಿಸಲಾಗುವುದು. ವಯಸ್ಸಿಗನುಗುಣವಾಗಿ ಲಸಿಕೆಯನ್ನು ನೀಡಬೇಕಾಗುತ್ತದೆ. ಎಲ್ಲರಿಗೂ ಒಂದೇ ಲಸಿಕೆ ಸೂಕ್ತವೆನಿಸದು’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಸಾರ್ಸ್‌–ಕೋವ್‌–2 ಸೋಂಕು ಪತ್ತೆ ಮಾಡಲು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ‘ಫೆಲುದಾ ಪೇಪರ್‌ ಸ್ಟ್ರಿಪ್’ ಪರೀಕ್ಷೆ ಮುಂದಿನ ಕೆಲವೇ ವಾರಗಳಲ್ಲಿ ವ್ಯಾಪಕ ಬಳಕೆಗೆ ಲಭ್ಯವಾಗಲಿದೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.