ADVERTISEMENT

ಭಾರತದ ಮೊದಲನೇ ಮಹಿಳಾ ಹೃದ್ರೋಗ ತಜ್ಞೆ ಡಾ. ಎಸ್ ಪದ್ಮಾವತಿ ಕೋವಿಡ್‌ನಿಂದ ಸಾವು

ಪಿಟಿಐ
Published 31 ಆಗಸ್ಟ್ 2020, 6:09 IST
Last Updated 31 ಆಗಸ್ಟ್ 2020, 6:09 IST
ಡಾ.ಎಸ್. ಪದ್ಮಾವತಿ
ಡಾ.ಎಸ್. ಪದ್ಮಾವತಿ   

ನವದೆಹಲಿ: ಕೋವಿಡ್-19ನಿಂದಾಗಿ ಭಾರತದ ಮೊದಲ ಮಹಿಳಾ ಹೃದ್ರೋಗ ತಜ್ಞೆ ಡಾ. ಎಸ್. ಪದ್ಮಾವತಿ (103) ನಿಧನರಾಗಿರುವುದಾಗಿ ನ್ಯಾಷನಲ್‌ ಹಾರ್ಟ್‌ ಇನ್‌ಸ್ಟಿಟ್ಯೂಟ್‌ (ಎನ್‌ಎಚ್‌ಐ) ಭಾನುವಾರ ತಿಳಿಸಿದೆ. 11 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

'ಗಾಡ್ ಮದರ್ ಆಫ್ ಕಾರ್ಡಿಯಾಲಜಿ' ಎಂದೇ ಜನಪ್ರಿಯವಾಗಿರುವ ಭಾರತದ ಮೊದಲ ಮಹಿಳಾ ಹೃದ್ರೋಗ ತಜ್ಞೆ ಡಾ. ಎಸ್. ಪದ್ಮಾವತಿ ಅವರು ಆಗಸ್ಟ್ 29 ರಂದು ಕೋವಿಡ್-19 ಸೋಂಕಿನಿಂದ ನಿಧನರಾಗಿದ್ದಾರೆ ಎಂದು ಎನ್‌ಎಚ್‌ಐ ಆಸ್ಪತ್ರೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸ್ಪ್ಯಾನಿಷ್ ಫ್ಲೂ ಸಾಂಕ್ರಾಮಿಕ ರೋಗವು ಜಗತ್ತನ್ನು ಆಕ್ರಮಿಸಿಕೊಳ್ಳುವ ಒಂದು ವರ್ಷಕ್ಕೂ ಮೊದಲು ಅಂದರೆ 1917ರಲ್ಲಿ ಬರ್ಮಾದಲ್ಲಿ (ಈಗಿನ ಮ್ಯಾನ್ಮಾರ್) ಎನ್‌ಎಚ್‌ಐ ಸ್ಥಾಪಕಿಯಾಗಿರುವ ಅವರು ಜನಿಸಿದರು.

ADVERTISEMENT

ಕೋವಿಡ್-19 ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು ಹಾಗೂ ಉಸಿರಾಟದ ತೊಂದರೆ ಮತ್ತು ಜ್ವರ ಕಾಣಿಸಿಕೊಂಡಿತ್ತು. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಹೀಗಿದ್ದರೂ ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ ಎಂದು ಎನ್‌ಎಚ್‌ಐ ತಿಳಿಸಿದೆ.

ಪಂಜಾಬಿ ಬಾಗ್‌ನಲ್ಲಿ ನಿಗದಿಪಡಿಸಿರುವ ಕೋವಿಡ್-19 ಶವಾಗಾರದಲ್ಲಿ ಭಾನುವಾರ ಡಾ. ಪದ್ಮಾವತಿ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ 1942ರಲ್ಲಿ ಭಾರತಕ್ಕೆ ವಲಸೆ ಬಂದಿದ್ದರು. ರಂಗೂನ್ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದರು ಮತ್ತು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಾರತಕ್ಕೆ ಹಿಂದಿರುಗಿದ ನಂತರ, ಅವರು ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿಕೊಂಡರು.

1962 ರಲ್ಲಿ ಡಾ. ಪದ್ಮಾವತಿ ಅವರು, ಆಲ್ ಇಂಡಿಯಾ ಹಾರ್ಟ್ ಫೌಂಡೇಶನ್ ಅನ್ನು ಸ್ಥಾಪಿಸಿದರು ಮತ್ತು 1981ರಲ್ಲಿ ದೆಹಲಿಯಲ್ಲಿ ನ್ಯಾಷನಲ್ ಹಾರ್ಟ್ ಇನ್‌ಸ್ಟಿಟ್ಯೂಟ್ಆಧುನಿಕ ಹೃದಯ ಆಸ್ಪತ್ರೆ ಸ್ಥಾಪಿಸಿದರು. ಇದು ದಕ್ಷಿಣ ಗೋಳಾರ್ಧದಲ್ಲಿ ಖಾಸಗಿ ವಲಯದಲ್ಲಿ ಮೊದಲ ಅತ್ಯಾಧುನಿಕ ಹೃದಯ ಪರೀಕ್ಷೆ ಪ್ರಯೋಗಾಲಯವನ್ನು (ಕ್ಯಾಥ್‌ ಲ್ಯಾಬ್‌) ಹೊಂದಿತ್ತು.

ಭಾರತದಲ್ಲಿ ಹೃದ್ರೋಗ ಚಿಕಿತ್ಸೆ ಅಭಿವೃದ್ಧಿಗೆ ಅವರು ಮಾಡಿದ ಸಾಧನೆ ಮತ್ತು ಕೊಡುಗೆಗಳಿಗಾಗಿ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಮತ್ತು ಎಫ್‌ಎಎಂಎಸ್‌ನ ಫೆಲೋಶಿಪ್ ಹಾಗೂ ಭಾರತ ಸರ್ಕಾರ 1967ರಲ್ಲಿ ಪದ್ಮಭೂಷಣ ಮತ್ತು 1992ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.