ADVERTISEMENT

ಜೈಪುರ: ಗಾಂಧಿವಾದಿ, ಚಿಂತಕ ಎಸ್‌.ಎನ್.ಸುಬ್ಬರಾವ್‌ ನಿಧನ

ಪಿಟಿಐ
Published 27 ಅಕ್ಟೋಬರ್ 2021, 12:24 IST
Last Updated 27 ಅಕ್ಟೋಬರ್ 2021, 12:24 IST
ಎಸ್.ಎನ್. ಸುಬ್ಬಾ ರಾವ್ (ಎಡ) ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರೊಂದಿಗೆ 2018 ರಲ್ಲಿ. ಚಿತ್ರ: ಸುಮನ್ ಸರ್ಕಾರ್
ಎಸ್.ಎನ್. ಸುಬ್ಬಾ ರಾವ್ (ಎಡ) ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರೊಂದಿಗೆ 2018 ರಲ್ಲಿ. ಚಿತ್ರ: ಸುಮನ್ ಸರ್ಕಾರ್   

ಜೈಪುರ: ಗಾಂಧಿವಾದಿ, ಚಿಂತಕ ಎಸ್‌.ಎನ್.ಸುಬ್ಬರಾವ್‌ (92) ಅವರು ಹೃದಯಾಘಾತದಿಂದ ಬುಧವಾರ ಇಲ್ಲಿ ನಿಧನರಾದರು.

ಅನಾರೋಗ್ಯದ ಕಾರಣದಿಂದ ಕೆಲ ದಿನಗಳ ಹಿಂದೆ ಅವರನ್ನು ಇಲ್ಲಿನ ಸವಾಯಿ ಮಾನ್‌ಸಿಂಗ್‌ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರ ಪಾರ್ಥಿವ ಶರೀರವನ್ನು ಬಾಪುನಗರದಲ್ಲಿರುವ ವಿನೋಬಾ ಜ್ಞಾನಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು. ಮುಖ್ಯಮಂತ್ರಿ ಅಶೋಕ್ ಗೆಹಲೋತ್‌, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್‌ ಸಿಂಗ್‌ ಡೋಟಾಸರಾ ಹಾಗೂ ಇತರ ಮುಖಂಡರು ಅಂತಿಮ ನಮನ ಸಲ್ಲಿಸಿದರು.

ADVERTISEMENT

ವಿನೋಬಾ ಜ್ಞಾನಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಗೆಹಲೋತ್‌ ಅವರು ಸುಬ್ಬರಾವ್‌ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

‘ನಾನು 10–12 ವರ್ಷದವನಾಗಿದ್ದಾಗ ಸುಬ್ಬರಾವ್‌ ಅವರ ಸಂಪರ್ಕಕ್ಕೆ ಬಂದೆ. ಜೋಧಪುರದಲ್ಲಿ ಅವರು ನಡೆಸುತ್ತಿದ್ದ ಹಲವಾರು ಶಿಬಿರಗಳಲ್ಲಿ ಭಾಗಿಯಾಗಿದ್ದೆ. ಶಿಬಿರಗಳು ಹಾಗೂ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಅವರು ದೇಶದ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದರು’ ಎಂದು ಅವರು ಹೇಳಿದರು.

‘ಕಳೆದ ವರ್ಷ ಅವರ ಆರೋಗ್ಯ ಕೆಟ್ಟಿತ್ತು. ಆಗ, ಬೆಂಗಳೂರಿಗೆ ಹೋಗಿ ಅವರನ್ನು ಭೇಟಿ ಮಾಡಿದ್ದೆ. ತಮ್ಮನ್ನು ಜೈಪುರಕ್ಕೆ ಕರೆದುಕೊಂಡು ಹೋಗಲು ಬಂದಿರುವೆ ಎಂದು ಅವರಿಗೆ ತಿಳಿಸಿದ್ದೆ. ಇತ್ತೀಚೆಗೆ ನನಗೆ ಪತ್ರ ಬರೆದಿದ್ದ ಅವರು, ಜೈಪುರಕ್ಕೆ ಬರುತ್ತಿರುವುದಾಗಿ ತಿಳಿಸಿದ್ದರು. ನಂತರ ಅವರು ರೈಲಿನ ಮೂಲಕ ಜೈಪುರಕ್ಕೆ ಬಂದರು’ ಎಂದು ತಿಳಿಸಿದರು.

‘ಸುಬ್ಬರಾವ್‌ ಅವರ ವಿಚಾರ- ಸಂದೇಶಗಳನ್ನು ಯುವ ಜನರಿಗೆ ತಲುಪಿಸಲು ವೇದಿಕೆಯೊಂದನ್ನು ಸ್ಥಾಪಿಸಲಾಗುವುದು’ ಎಂದೂ ಮುಖ್ಯಮಂತ್ರಿ ಗೆಹಲೋತ್‌ ಹೇಳಿದರು.

ರಾಜಸ್ಥಾನ ರಾಜ್ಯಪಾಲ ಕಲ್‌ರಾಜ್ ಮಿಶ್ರಾ ಅವರು ಕೂಡ ಸುಬ್ಬರಾವ್‌ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.