ADVERTISEMENT

ಕೇರಳದ ಕಣ್ಣೂರಿನಲ್ಲಿ ಪೊಲೀಸ್ – ಮಾವೋವಾದಿಗಳ ನಡುವೆ ಗುಂಡಿನ ಕಾಳಗ

ಪಿಟಿಐ
Published 13 ನವೆಂಬರ್ 2023, 12:53 IST
Last Updated 13 ನವೆಂಬರ್ 2023, 12:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‌ಕಣ್ಣೂರು (ಕೇರಳ): ಕೇರಳ ಪೊಲೀಸ್‌ನ ವಿಶೇಷ ಪಡೆ ಹಾಗೂ ಮಾವೋವಾದಿಗಳ ನಡುವೆ ಕಣ್ಣೂರು ಜಿಲ್ಲೆಯಲ್ಲಿ ಇಂದು (ಸೋಮವಾರ) ಗುಂಡಿನ ಕಾಳಗ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರಿಕ್ಕೊಟ್ಟಾಕರಿ ‍‍ಪೊಲೀಸ್‌ ಠಾಣೆ ವ್ಯಾಪ್ತಿಯ ಉರುಪ್ಪುಂಕುಟ್ಟಿ ಕಾಡಿನಲ್ಲಿ ಈ ಕಾಳಗ ನಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಆದರೆ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

ಕಾಡಿನಲ್ಲಿ ಕೂಂಬಿಂಗ್‌ನಲ್ಲಿದ್ದ ಪೊಲೀಸರ ಮೇಲೆ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ‍ಪೊಲೀಸರು ದಾಳಿ ನಡೆಸಿದ್ದಾರೆ. ಇದಾದ ಬಳಿಕ ಸ್ಥಳದಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದು, ಮೂರು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳದಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಮಾವೋವಾದಿಗಳು ಗಾಯಗೊಂಡಿದ್ದಾರೆಂದು ಶಂಕಿಸಲಾಗಿದೆ.

ADVERTISEMENT

ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯುಎಪಿಎ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ವಾರವಷ್ಟೇ ವಯನಾಡು ಜಿಲ್ಲೆಯಲ್ಲಿ ಪೊಲೀಸರು ಹಾಗೂ ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಆ ಘಟನೆಯಲ್ಲಿ ಚಂದ್ರು ಹಾಗೂ ಉಣ್ಣಿಮಯ ಎನ್ನುವ ಇಬ್ಬರು ಮಾವೋವಾದಿಗಳನ್ನು ಬಂಧಿಸಲಾಗಿತ್ತು. ವಯನಾಡಿನ ತಳಪ್ಪುಳ ಪೊಲೀಸ್‌ ಠಾಣೆ ವ್ಯಾಪ್ತಿಯ ಪೆರಿಯ ಪ್ರದೇಶದಲ್ಲಿ ಈ ಗಲಾಟೆ ನಡೆದಿತ್ತು.

ಕಳೆದ ತಿಂಗಳು ವಯನಾಡು ಜಿಲ್ಲೆಯ ಮಕ್ಕಿಮಲದಲ್ಲಿ ಶಸ್ತ್ರಧಾರಿಗಳಾದ 6 ಮಂದಿಯ ಮಾವೋವಾದಿಗಳ ಗುಂಪೊಂದು, ಖಾಸಗಿ ರೆಸಾರ್ಟ್‌ಗೆ ನುಗ್ಗಿ, ಅಲ್ಲಿನ ಮ್ಯಾನೇಜರ್‌ ಮೊಬೈಲ್‌ ಕಸಿದುಕೊಂದು, ಎಸ್ಟೇಟ್‌ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿತ್ತು.

ಕಣ್ಣೂರು ಹಾಗೂ ವಯನಾಡು ಜಿಲ್ಲೆಯ ವಿವಿಧ ಕಾಡುಗಳಲ್ಲಿ ಮಾವೋವಾದಿಗಳು ಅಡಗಿರುವ ಶಂಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.