ADVERTISEMENT

ಕೋವಿಡ್ ರೋಗಿಗಳಿಗೆ ಆಸ್ಪತ್ರೆ ದಾಖಲಾತಿ ಸುಲಭವಾಗಲಿ: ಯೋಗಿಗೆ ಪ್ರಿಯಾಂಕಾ ಗಾಂಧಿ

ಪಿಟಿಐ
Published 19 ಏಪ್ರಿಲ್ 2021, 11:10 IST
Last Updated 19 ಏಪ್ರಿಲ್ 2021, 11:10 IST
ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ   

ನವದೆಹಲಿ: ಗಂಭೀರ ಸ್ಥಿತಿಯಲ್ಲಿರುವ ಕೋವಿಡ್ -19 ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಸುಲಭವಾಗಿ ಪ್ರವೇಶ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸಿದ್ದಾರೆ.

ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಅವರ ಒಪ್ಪಿತ ಪತ್ರವಿಲ್ಲದೆ ಉತ್ತರ ಪ್ರದೇಶದಲ್ಲಿನ ಅನೇಕ ಗಂಭೀರ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುವುದಿಲ್ಲ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಈ ಮನವಿ ಮಾಡಿದ್ದಾರೆ.

'ಸಿಎಂಒ ಅವರ ಪತ್ರವಿಲ್ಲದೆ ಅನೇಕ ಗಂಭೀರ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳನ್ನು ದಾಖಲಿಸಿಕೊಳ್ಳಲಾಗುವುದಿಲ್ಲ ಎಂಬ ಮಾಹಿತಿಯು ಅನೇಕ ಮೂಲಗಳಿಂದ ಕೇಳಿಬರುತ್ತಿದೆ. ಸಿಎಮ್ಒ ಪತ್ರಕ್ಕಾಗಿ ಕಾಯುತ್ತಿರುವಾಗ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳೇ, ದಯವಿಟ್ಟು ಅಂತಹ ನಿಯಮಗಳನ್ನು ಕೊನೆಗೊಳಿಸಿ, ಜನರ ಜೀವವನ್ನು ಉಳಿಸಿ' ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ADVERTISEMENT

'ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಸುಲಭವಾಗಿ ಆಸ್ಪತ್ರೆಗೆ ದಾಖಲಾಗುವಂತಹ ವ್ಯವಸ್ಥೆಯನ್ನು ಶೀಘ್ರವೇ ಮಾಡಿ' ಎಂದು ಅವರು ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶವು ಭಾನುವಾರ ಅತಿಹೆಚ್ಚು ಕೋವಿಡ್ ಪ್ರಕರಣಗಳು ಮತ್ತು ಸಾವಿನ ಪ್ರಮಾಣವನ್ನು ದಾಖಲಿಸಿದೆ. ಸೋಂಕಿನಿಂದಾಗಿ 129 ಜನರು ಬಲಿಯಾಗಿದ್ದು, 30,596 ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆಯು 8,51,620ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.