ADVERTISEMENT

ಕ್ಷಮಾಪಣೆ ಬೇಡ, ನಿಮ್ಮದು ಮೊಸಳೆ ಕಣ್ಣೀರು: ವಿಜಯ್ ಶಾಗೆ ಸುಪ್ರೀಂ ಕೋರ್ಟ್‌ ತರಾಟೆ

ಪಿಟಿಐ
Published 19 ಮೇ 2025, 13:28 IST
Last Updated 19 ಮೇ 2025, 13:28 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಕರ್ನಲ್‌ ಸೋಫಿಯಾ ಖುರೇಷಿ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಸಚಿವ ವಿಜಯ್‌ ಶಾ ಪ್ರಕರಣಕ್ಕೆ ಸಂಬಂಧಿಸಿ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲು ಮಧ್ಯಪ್ರದೇಶ ಪೊಲೀಸ್‌ ಮಹಾನಿರ್ದೇಶಕರಿಗೆ ಸುಪ್ರೀಂ ಕೋರ್ಟ್‌ ಸೋಮವಾರ ಸೂಚಿಸಿದೆ.

‘ವಿಜಯ್‌ ಶಾ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿ’ ಎಂಬ ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ, ವಿಜಯ್‌ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಎನ್‌. ಕೋಟಿಶ್ವರ್‌ ಸಿಂಗ್‌ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು.

ADVERTISEMENT

‘ನಾನು ಕ್ಷಮಾಪಣೆ ಕೇಳಿದ್ದೇನೆ. ಆದ್ದರಿಂದ ನನ್ನ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು’ ಎನ್ನುವುದು ವಿಜಯ್ ಶಾ ಅವರ ವಾದ. ಈ ಬಗ್ಗೆ ಪ್ರತಿಕ್ರಿಯಿಸಿದ ಪೀಠ, ‘ಕ್ಷಮಾಪಣೆ ಕೇಳಿದ ವಿಡಿಯೊವನ್ನು ನಾವು ನೋಡಿದ್ದೇವೆ. ನೀವು ಮೊಸಳೆ ಕಣ್ಣೀರು ಹಾಕಿದ್ದೀರಿ ಅಥವಾ ಕಾನೂನು ಕ್ರಮಗಳನ್ನು ತಪ್ಪಿಸಿಕೊಳ್ಳಲು ಕ್ಷಮೆ ಕೇಳಿದ್ದೀರಿ’ ಎಂದಿತು.

‘ಇಂಥ ಹೇಳಿಕೆಯಿಂದ ಇಡೀ ದೇಶಕ್ಕೆ ನಾಚಿಕೆಯಾಗಿದೆ... ನೀವು ಕಾರ್ಯಕ್ರಮದಲ್ಲಿ ಮಾತನಾಡಿದ ವಿಡಿಯೊವನ್ನೂ ನೋಡಿದ್ದೇವೆ. ಅದ್ಯಾವ ಇಂದ್ರೀಯ ಶಕ್ತಿ ನಿಮ್ಮನ್ನು ತಡೆಯಿತೊ ಗೊತ್ತಿಲ್ಲ. ನೀವು ಇನ್ನಷ್ಟು ಕೆಟ್ಟ ಮಾತುಗಳನ್ನು ಆಡಲು ಬಯಸಿದ್ದೀರಿ. ಬಹುಶಃ ಕೆಟ್ಟ ಮಾತುಗಳನ್ನು ಆಡಲು ನಿಮಗೆ ಪದಗಳೂ ಸಿಗದೇ ಇದ್ದಿರಬಹುದು. ನಿಮಗೆ ನಾಚಿಕೆಯಾಗಬೇಕು’ ಎಂದು ಪೀಠ ಅಭಿಪ್ರಾಯಪಟ್ಟಿತು.

‘ಇದು ಯಾವ ಸೀಮೆಯ ಕ್ಷಮಾಪಣೆ? ನಮಗೆ ನಿಮ್ಮ ಕ್ಷಮಾಪಣೆ ಬೇಡ. ಕಾನೂನಿನಡಿಯಲ್ಲಿ ನಿಮ್ಮ ಜೊತೆ ಹೇಗೆ ವ್ಯವಹರಿಸಬೇಕು ಎಂದು ನಮಗೆ ಗೊತ್ತು. ಕ್ಷಮಾಪಣೆ ಕೇಳಲು ನೀವೇನು ನ್ಯಾಯಾಂಗ ನಿಂದನೆ ಮಾಡಿಲ್ಲ. ತಪ್ಪು ಮಾಡುವುದು ಆಮೇಲೆ ಕೋರ್ಟ್‌ಗೆ ಬಂದು ಕ್ಷಮಾಪಣೆ ಕೇಳುವುದು, ಇದೆಂಥಾ ವರ್ತನೆ?’ ಎಂದು ‍ಪೀಠ ಹೇಳಿತು.

‘ಮಂಗಳವಾರ ಬೆಳಿಗ್ಗೆ 10ರ ಒಳಗೆ ಎಸ್‌ಐಟಿ ರಚಿಸಬೇಕು. ಐ.ಜಿ ಸ್ಥಾನಮಾನದ ಅಧಿಕಾರಿಯೊಬ್ಬರು ಇದರ ನೇತೃತ್ವ ವಹಿಸಬೇಕು. ಈ ತಂಡದಲ್ಲಿ ಮಹಿಳಾ ಅಧಿಕಾರಿಯೂ ಇರಬೇಕು. ತಂಡವು ತನ್ನ ಮೊದಲ ವರದಿಯನ್ನು ಮೇ 28ರ ಒಳಗಾಗಿ ಸಲ್ಲಿಸಬೇಕು’ ಎಂದು ಪೀಠ ಆದೇಶಿಸಿದೆ.

ಕ್ಷಮಾಪಣೆ ಪದಕ್ಕೆ ಅರ್ಥವಿದೆ. ಕೆಲವೊಮ್ಮೆ ಜನರು ಬಹಳ ನಯವಾದ ಭಾಷೆಯಲ್ಲಿ ಬಹಳ ಕೃತಕವಾಗಿ ಕ್ಷಮೆ ಕೇಳುತ್ತಾರೆ. ಕಾನೂನು ಕ್ರಮ ತಪ್ಪಿಸಿಕೊಳ್ಳಲು ಕೆಲವರು ಮೊಸಳೆ ಕಣ್ಣೀರು ಹಾಕುತ್ತಾರೆ. ನಿಮ್ಮದು ಯಾವ ರೀತಿಯ ಕ್ಷಮಾಪಣೆ? ಇದನ್ನು ತಿಳಿದುಕೊಳ್ಳುವ ಕುತೂಹಲ ನಮಗಿದೆ.
– ಸುಪ್ರೀಂ ಕೋರ್ಟ್‌ ಪೀಠ

ಪೀಠ ಹೇಳಿದ್ದು?

  • ನೀವು ಇನ್ನಷ್ಟು ಕೆಟ್ಟ ಮಾತುಗಳನ್ನು ಆಡಲು ಬಯಸಿದ್ದೀರಿ ಎಂದು ಜನರಿಗೆ ಗೊತ್ತಾಗಲಿಲ್ಲ. ಯಾಕೆಂದರೆ, ಮಾಧ್ಯಮದವರು ಕೇವಲ ನಿಮ್ಮ ಎರಡು ಪದಗಳನ್ನು ಮಾತ್ರ ತೋರಿಸುತ್ತಿದ್ದಾರೆ

  • ಜನರ ಮುಂದೆ ನೀವು ಸಂಪೂರ್ಣವಾಗಿ ಬೆತ್ತಲಾಗಿದ್ದೀರಿ. ಜನರ ಭಾವನೆಗೆ ತೀವ್ರ ಪೆಟ್ಟು ಬಿದ್ದಿದೆ. ಹೌದು ನಾನು ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುವಷ್ಟು ಉತ್ತಮರು ನೀವಾಗಬೇಕಿತ್ತು. ಆದರೆ ನೀವು, ‘ನನ್ನಿಂದ ತಪ್ಪಾಗಿದ್ದರೆ’, ‘ಅದು.. ಇದು..’ ಎನ್ನುತ್ತಿದ್ದೀರಿ

  • ಈ ಸನ್ನಿವೇಶದಿಂದ ಹೇಗೆ ಪಾರಾಗುತ್ತೀರಿ ಎನ್ನುವುದು ನಿಮಗೇ ಬಿಟ್ಟಿದ್ದು. ಕಾನೂನಿನ ಮೇಲೆ ವಿಶ್ವಾಸವಿಟ್ಟಿರುವ ದೇಶ ನಮ್ಮದು. ನಾವೆಲ್ಲರೂ ಒಂದೇ ಕಾನೂನನ್ನು ಪಾಲಿಸುತ್ತೇವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.