
(ಚಿತ್ರ ಕೃಪೆ: X/@indiametsky)
ನವದೆಹಲಿ: ಆಫ್ರಿಕಾ ಖಂಡದ ಇಥಿಯೋಪಿಯಾದಲ್ಲಿ ಹೊರಹೊಮ್ಮಿದ ಜ್ವಾಲಾಮುಖಿಯಿಂದ ಉಂಟಾಗಿರುವ ದಟ್ಟ ಹೊಗೆಯು ಭಾರತದ ವಿಮಾನಗಳ ಸಂಚಾರಕ್ಕೆ ಹೆಚ್ಚಿನ ಸಮಸ್ಯೆ ಉಂಟಾಗುವ ಆತಂಕ ಕಾಡಿದೆ. ಈ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣಗಳು ಮುನ್ನಚ್ಚೆರಿಕೆ ವಹಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸೂಚನೆ ನೀಡಿದೆ.
ಸಂಭಾವ್ಯ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ ಹಲವು ವಿಮಾನಯಾನ ಸಂಸ್ಥೆಗಳು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿವೆ. ಇದರಿಂದಾಗಿ ವಿಮಾನಯಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಇಥಿಯೋಪಿಯಾದಲ್ಲಿ 'ಹೈಲಿಗುಬ್ಬಿ' ಜ್ವಾಲಾಮುಖಿ ಸ್ಫೋಟದಿಂದ ಉಂಟಾದ ದಟ್ಟವಾದ ಮೋಡದ ರೀತಿಯ ಹೊಗೆಯು ವಿಮಾನಯಾನ ಕಾರ್ಯಾಚರಣೆಗೆ ಸಮಸ್ಯೆಯನ್ನುಂಟು ಮಾಡುತ್ತಿದೆ. ಈ ದಡ್ಡವಾದ ಹೊಗೆಯು ಭಾರತದ ಪಶ್ಚಿಮ ಭಾಗದತ್ತ ತೇಲುವ ಸಾಧ್ಯತೆ ಎಂದು ವರದಿಯಾಗಿದೆ. ಹೊಗೆಯ ದಟ್ಟಣೆಯ ಕುರಿತು ನಿರಂತರ ಅವಲೋಕನ ನಡೆಯುತ್ತಿದೆ.
ಆಕಾಸಾ ಏರ್, ಇಂಡಿಗೊ ಮತ್ತು ಕೆಎಲ್‌ಎಂ ವಿಮಾನಯಾನ ಸಂಸ್ಥೆಗಳು ಕೆಲವು ವಿಮಾನಗಳನ್ನು ರದ್ದುಗೊಳಿಸಿವೆ.
ಇಥಿಯೋಪಿಯಾದಿಂದ ಜ್ವಾಲಾಮುಖಿ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ ಜೆಡ್ಡಾ, ಕುವೈತ್ ಮತ್ತು ಅಬುಧಾಬಿಯಿಂದ ಆಗಮನ ಹಾಗೂ ನಿರ್ಗಮಿಸುವ ವಿಮಾನಗಳ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ಆಕಾಸಾ ಏರ್ ಪ್ರಕಟಣೆ ತಿಳಿಸಿದೆ.
ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಗಾ ವಹಿಸಲಾಗುತ್ತಿದೆ. ಸುರಕ್ಷಿತ ಕಾರ್ಯಾಚರಣೆಗಾಗಿ ಮುನ್ನೆಚ್ಚೆರಿಕೆ ವಹಿಸಲಾಗುತ್ತಿದೆ ಎಂದು ಇಂಡಿಗೊ ತಿಳಿಸಿದೆ.
ಇಂಡಿಗೊ ಮಧ್ಯಪ್ರಾಚ್ಯದ ಕೆಲವು ವಿಮಾನಗಳನ್ನುರದ್ದುಗೊಳಿಸಿರುವುದಾಗಿ ವರದಿಯಾಗಿದೆ. ಹಾಗೆಯೇ ಡಚ್ ಸಂಸ್ಥೆಯಾದ ಕೆಎಲ್‌ಎಂ, ಆರ್ಮ್‌ಸ್ಟರ್‌ಡ್ಯಾಮ್‌ನಿಂದ ದೆಹಲಿಗೆ ಸೇವೆಯನ್ನು ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿರುವುದಾಗಿ ಏರ್ ಇಂಡಿಯಾ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.