ADVERTISEMENT

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಶಾಸ್ತ್ರಿ ಮೊಮ್ಮಗ ವಿಭಾಕರ್‌

ಪಿಟಿಐ
Published 14 ಫೆಬ್ರುವರಿ 2024, 12:20 IST
Last Updated 14 ಫೆಬ್ರುವರಿ 2024, 12:20 IST
   

ನವದೆಹಲಿ / ಲಖನೌ: ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೊಮ್ಮಗ ವಿಭಾಕರ್ ಶಾಸ್ತ್ರಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದಾರೆ.

ಲಖನೌನನಲ್ಲಿ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಭೂಪಿಂದರ್‌ ಸಿಂಗ್ ಹಾಗೂ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ವಿಭಾಕರ್ ಅವರ ಪಕ್ಷ ಸೇರ್ಪಡೆಯು ಸಾಮಾಜಿಕ ಕಾರ್ಯಕರ್ತರಿಗೆ ಸಂದೇಶವಾಗಿದೆ. ವಿಭಾಕರ್ ಅವರು ಮಾಜಿ ಪ್ರಧಾನಿಗಳ ಕುಟುಂಬಕ್ಕೆ ಸೇರಿದವರು. ಈ ಬೆಳವಣಿಗೆಯಿಂದ ಪಕ್ಷಕ್ಕೆ ಲಾಭವಾಗಲಿದೆ ಎಂದು ಬ್ರಜೇಶ್ ಪಾಠಕ್‌ ಹೇಳಿದ್ದಾರೆ.

ADVERTISEMENT

ಬಿಜೆಪಿ ಸೇರುವುದಕ್ಕೆ ಕೆಲವೇ ಗಂಟೆಗಳಿಗೆ ಮುನ್ನ ಕಾಂಗ್ರೆಸ್ ತೊರೆಯುತ್ತಿರುವುದಾಗಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದರು. ‘ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೇ, ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಈ ಮೂಲಕ ರಾಜೀನಾಮೆ ಸಲ್ಲಿಸುತ್ತಿದ್ದೇನೆ’ ಎಂದು ಅವರು ಬರೆದುಕೊಂಡಿದ್ದರು.

ವಿಭಾಕರ್ ಅವರು ಬಿಜೆಪಿ ಸೇರಿರುವುದನ್ನು ಅವರ ಸಹೋದರ, ಅಲಹಾಬಾದ್‌ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರೂ ಆಗಿರುವ ಸಿದ್ಧಾರ್ಥ್‌ನಾಥ್‌ ಸಿಂಗ್‌ ಅವರು ಸ್ವಾಗತಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಹಲವು ಪ್ರಮುಖ ನಾಯಕರ ನಿರ್ಗಮನಕ್ಕೆ ಕಾಂಗ್ರೆಸ್ ಸಾಕ್ಷಿಯಾಗಿದೆ. ಅಶೋಕ್ ಚವಾಣ್, ಮಿಲಿಂದ್ ದಿಯೊರ, ಬಾಬಾ ಸಿದ್ದೀಕಿ, ಜ್ಯೋತಿರಾಧಿತ್ಯ ಸಿಂಧಿಯಾ, ಜಿತಿನ್ ಪ್ರಸಾದ್‌, ಪ್ರಿಯಾಂಕಾ ಚತುರ್ವೇದಿ, ಸುಷ್ಮಿತ ದೇವ್, ಆರ್‌.ಪಿ.ಎನ್. ಸಿಂಗ್‌ ಹಾಗೂ ಜೈವೀರ್‌ ಶೆರ್ಗಿಲ್ ಸೇರಿ ಹಲವು ನಾಯಕರು ಕಾಂಗ್ರೆಸ್‌ ತೊರೆದು ವಿವಿಧ ಪಕ್ಷಗಳಿಗೆ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.