
ನವದೆಹಲಿ: ಚೀನಾಕ್ಕೆ ಪ್ರಯಾಣಿಸುವಾಗ ಅಥವಾ ಚೀನಾ ಮೂಲಕ ಇತರ ದೇಶಗಳಿಗೆ ಪ್ರಯಾಣ ಬೆಳೆಸುವಾಗ ಸ್ವಂತ ವಿವೇಚನೆ ಬಳಸುವ ಜತೆಗೆ ಜಾಗರೂಕರಾಗಿರಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಲಹೆ ನೀಡಿದೆ.
ಅರುಣಾಚಲ ಪ್ರದೇಶದ ಮಹಿಳೆಯೊಬ್ಬರು ಶಾಂಘೈ ವಿಮಾನ ನಿಲ್ದಾಣದಲ್ಲಿ ಕಿರುಕುಳ ಅನುಭವಿಸಿದ ಘಟನೆ ನಡೆದ ಎರಡು ವಾರಗಳ ನಂತರ ಈ ಬೆಳವಣಿಗೆ ನಡೆದಿದೆ.
‘ಚೀನಾದ ವಿಮಾನ ನಿಲ್ದಾಣಗಳ ಮೂಲಕ ಪ್ರಯಾಣಿಸುವ ಭಾರತದ ನಾಗರಿಕರನ್ನು ಗುರಿಯಾಗಿಸುವುದಿಲ್ಲ, ಬಂಧಿಸುವುದಿಲ್ಲ ಅಥವಾ ಕಿರುಕುಳ ನೀಡುವುದಿಲ್ಲ. ವಿಮಾನ ಪ್ರಯಾಣಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ನಿಯಮಗಳನ್ನು ಚೀನಾ ಗೌರವಿಸಲಿದೆ ಎಂದು ಅಲ್ಲಿನ ಅಧಿಕಾರಿಗಳು ಭರವಸೆ ನೀಡುವುದಾಗಿ ನಾವು ನಿರೀಕ್ಷಿಸುತ್ತೇವೆ’ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು.
ಶಾಂಘೈ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಮ್ಮ ಪಾಸ್‌ಪೋರ್ಟ್ ಅನ್ನು ಪರಿಗಣಿಸಲು ನಿರಾಕರಿಸಿ 18 ತಾಸು ವಶಕ್ಕೆ ಪಡೆದಿದ್ದರು ಎಂದು ಬ್ರಿಟನ್‌ನಲ್ಲಿ ನೆಲಸಿರುವ ಅರುಣಾಚಲ ಪ್ರದೇಶದ ಪೆಮಾ ವಾಂಗ್‌ಜೊಮ್ ತೊಂಗ್‌ಡಾಕ್ ಎಂಬವರು ಈಚೆಗೆ ಆರೋಪಿಸಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಭಾರತವು ಚೀನಾಕ್ಕೆ ತನ್ನ ಪ್ರತಿಭಟನೆ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.