ADVERTISEMENT

ಉನ್ನಾವ್‌ ಬಾಲಕಿ ಮೇಲೆ ಅತ್ಯಾಚಾರ: ಶಾಸಕ ಸೆಂಗರ್‌ ಅಪರಾಧಿ

ಪಿಟಿಐ
Published 17 ಡಿಸೆಂಬರ್ 2019, 2:18 IST
Last Updated 17 ಡಿಸೆಂಬರ್ 2019, 2:18 IST
ಸೆಂಗರ್‌
ಸೆಂಗರ್‌   

ನವದೆಹಲಿ : ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌ ವಿರುದ್ಧದ ಅತ್ಯಾಚಾರ ಆರೋಪವು ಸಾಬೀತಾಗಿದೆ ಎಂದು ದೆಹಲಿಯ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಸೋಮವಾರ ಹೇಳಿದೆ. ಪ್ರಕರಣದ ಸಹ ಆರೋಪಿ ಶಶಿ ಸಿಂಗ್‌ ಅವರನ್ನು ಖುಲಾಸೆಗೊಳಿಸಿದೆ.

ಅಪರಾಧಿಯ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸುವ ವಿಚಾರಣೆಯನ್ನು ಬುಧವಾರ (ಡಿ.18) ನಡೆಸುವುದಾಗಿ ನ್ಯಾಯಾಧೀಶ ಧರ್ಮೇಶ್‌ ಶರ್ಮಾ ಹೇಳಿದ್ದಾರೆ.

2017ರಲ್ಲಿ ಬಾಲಕಿಯೊಬ್ಬಳನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪವನ್ನು ಸೆಂಗರ್‌ ಎದುರಿಸುತ್ತಿದ್ದ. ‘ಸಂತ್ರಸ್ತೆಯು ಮಾಡಿರುವ ಆರೋಪಗಳು ಪೂರ್ವಗ್ರಹಪೀಡಿತವಲ್ಲ ಮತ್ತು ಅವು ಸತ್ಯದಿಂದ ಕೂಡಿವೆ ಎಂಬುದು ನನಗೆ ಮನವರಿಕೆ ಆಗಿದೆ’ ಎಂದು ನ್ಯಾಯಾಧೀಶರು ಹೇಳಿದರು.

ADVERTISEMENT

ಸಂತ್ರಸ್ತೆಯು ಉತ್ತರಪ್ರದೇಶದ ಮುಖ್ಯಮಂತ್ರಿಗೆ ಪತ್ರ ಬರೆದ ನಂತರ ಆಕೆಯ ಕುಟುಂಬದವರಿಗೆ ಕಿರುಕುಳ ನೀಡಲಾಗಿದೆ. ಅವರ ವಿರುದ್ಧ ಹಲವು ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಲಾಗಿತ್ತು. ‘ಇಂಥ ಪ್ರತಿ ಪ್ರಕರಣದ ಹಿಂದೆ ಸೆಂಗರ್‌ ಕೈವಾಡವಿರುವುದು ಸ್ಪಷ್ಟವಾಗಿ ಗೋಚರಿಸಿದೆ’ ಎಂದು ನ್ಯಾಯಾಲಯ ಹೇಳಿದೆ.

ಅತ್ಯಾಚಾರಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಪೋಕ್ಸೊ ಕಾಯ್ದೆಯಡಿ ಸೆಂಗರ್‌ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲು ಈ ಕಾನೂನುಗಳಡಿ ಅವಕಾಶವಿದೆ. ತೀರ್ಪನ್ನು ಓದುತ್ತಿದ್ದಂತೆ ಸೆಂಗರ್‌ ನ್ಯಾಯಾಲಯದಲ್ಲೇ ಕಣ್ಣೀರಿಟ್ಟ.

ದೂರು ನೀಡುವಲ್ಲಿ ವಿಳಂಬ ಆಗಿರುವ ವಿಚಾರವನ್ನು ಉಲ್ಲೇಖಿಸಿದ ನ್ಯಾಯಾಧೀಶರು, ‘ಸಂತ್ರಸ್ತೆಯು ಗ್ರಾಮೀಣ ಪ್ರದೇಶದ ಹುಡುಗಿಯೇ ವಿನಾ ಮಹಾನಗರದ ಸುಶಿಕ್ಷಿತ ಕುಟುಂಬದವಳಲ್ಲ. ಆಕೆಗೆ ಬೆದರಿಕೆ ಇತ್ತು. ಆತಂಕಕ್ಕೆ ಒಳಗಾಗಿದ್ದಳು. ಆದ್ದರಿಂದ ಸ್ವಲ್ಪ ವಿಳಂಬವಾಗಿ ಆಕೆ ನಿರ್ಧಾರಗಳನ್ನು ತೆಗೆದುಕೊಂಡಳು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಬಿಐ ಈ ಪ್ರಕರಣದಲ್ಲಿ ತನಿಖೆ ಹಾಗೂ ಕಾನೂನುಕ್ರಮಗಳ ಕುರಿತಾದ ಮಾರ್ಗಸೂಚಿಯನ್ನು ಪಾಲಿಸದಿರುವುದು ಅಚ್ಚರಿ ಮೂಡಿಸಿದೆ ಎಂದುಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಧರ್ಮೇಶ್ ಶರ್ಮಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.