ADVERTISEMENT

Iran–US Conflict: ಇರಾನ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಚರ್ಚೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 2:45 IST
Last Updated 15 ಜನವರಿ 2026, 2:45 IST
<div class="paragraphs"><p>ಭಾರತ ವಿದೇಶಾಂಗ ಸಚಿವ ಜೈಶಂಕರ್</p></div>

ಭಾರತ ವಿದೇಶಾಂಗ ಸಚಿವ ಜೈಶಂಕರ್

   

ನವದೆಹಲಿ: ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸರ್ವಾಧಿಕಾರಿ ಆಡಳಿತ ಹಾಗೂ ಹದಗೆಟ್ಟ ಆರ್ಥಿಕತೆ ವಿರುದ್ಧ ದಂಗೆ ಎದ್ದ ಪ್ರತಿಭಟನಕಾರರ ವಿರುದ್ಧ ಅಲ್ಲಿನ ಸರ್ಕಾರ ದಮನಕಾರಿ ನೀತಿ ಅನುಸರಿಸಿದೆ. ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ಜನರನ್ನು ಹತ್ಯೆ ಮಾಡಿದೆ. ಈ ನಡುವೆ ಅಲ್ಲಿ ನೆಲೆಸಿರುವ ಭಾರತೀಯರಿಗೆ ದೇಶ ತೊರೆಯುವಂತೆ ಸೂಚನೆ ನೀಡಲಾಗಿದೆ.

ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡ ಬೆನ್ನಲ್ಲೆ, ಭಾರತ ತನ್ನ ಪ್ರಜೆಗಳಿಗೆ ಪರ್ಷಿಯನ್ ಕೊಲ್ಲಿ ರಾಷ್ಟ್ರವನ್ನು ತೊರೆಯುವಂತೆ ಸೂಚನೆ ನೀಡಿದೆ. ಈ ನಡುವೆ ಭಾರತ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಜೊತೆ ಬುಧವಾರ ದೂರವಾಣಿ ಮೂಲಕ ಮಾತನಾಡಿದರು.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಎಸ್. ಜೈಶಂಕರ್, ‘ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಗ್ಚಿ ಅವರಿಂದ ಕರೆ ಬಂದಿತ್ತು. ಇರಾನ್ ಮತ್ತು ಸುತ್ತಮುತ್ತಲಿನ ಪರಿಸ್ಥಿತಿಗಳ ಬಗ್ಗೆ ನಾವು ಚರ್ಚಿಸಿದ್ದೇವೆ’ ಎಂದು ಅರಗ್ಚಿ ಜೊತೆ ಚರ್ಚಿಸಿದ್ದಾರೆ.

ಇರಾನ್‌ನಲ್ಲಿ ದಿನೇ ದಿನೇ ದಂಗೆಗಳು ಹೆಚ್ಚಾಗುತ್ತಿವೆ ಮತ್ತು ಅಮೆರಿಕ ಕೂಡ ಇರಾನ್ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಭಾರತ ತನ್ನ ಪ್ರಜೆಗಳಿಗೆ ಇರಾನ್ ತೊರೆಯುವ ಸಲಹೆ ನೀಡಿದೆ.

‘ಇರಾನ್‌ನಲ್ಲಿ ನಡೆಯುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳು (ವಿದ್ಯಾರ್ಥಿಗಳು, ಯಾತ್ರಿಕರು, ವ್ಯಾಪಾರಸ್ಥರು ಮತ್ತು ಪ್ರವಾಸಿಗರು) ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವಿಧಾನಗಳ ಮೂಲಕ ಇರಾನ್‌ನಿಂದ ಹೊರಡಲು ಸೂಚನೆ ನೀಡಲಾಗಿದೆ’ ಎಂದು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

‘ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳು ಪಾಸ್‌ಪೋರ್ಟ್‌, ಐಡಿ ಸೇರಿದಂತೆ ಪ್ರಯಾಣಕ್ಕೆ ಬೇಕಾದ ದಾಖಲೆಗಳು ಸಮರ್ಪಕವಾಗಿಲ್ಲದಿದ್ದರೆ, ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ’ ಎಂದು ಕಚೇರಿ ತನ್ನ ಪ್ರಕಟಣೆಯಲ್ಲಿ ಸೂಚಿಸಿದೆ.

ಸದ್ಯ, ಇರಾನ್‌ನಲ್ಲಿ ಇಂಟರ್ನೆಟ್ ಸಮಸ್ಯೆ ಇದೆ. ಹಾಗಾಗಿ ಇರಾನ್‌ನಲ್ಲಿದ್ದು, ರಾಯಭಾರ ಕಚೇರಿಯಲ್ಲಿ ನೋಂದಾಯಿಸದ ಭಾರತೀಯ ಪ್ರಜೆಗಳು ಭಾರತ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.