ಐಸ್ಟಾಕ್ ಚಿತ್ರ
ನವದೆಹಲಿ: ನಕಲಿ ದಾಖಲೆ, ಅಧಿಕಾರಿಗಳ ಸಹಿ ಬಳಸಿ ಆಸ್ತಿಯನ್ನು ಅಡವಿಟ್ಟು ಬ್ಯಾಂಕಿನಿಂದ ₹75 ಲಕ್ಷ ಸಾಲ ಪಡೆದು ವಂಚಿಸಿದವರನ್ನು ಅತ್ಯಾಧುನಿಕ ಮುಖ ಚಹರೆ ಪತ್ತೆ ತಂತ್ರಜ್ಞಾನ (FRS) ಬಳಸಿ ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಪಂಕಜ್ ಸಚ್‌ದೇವ್ ಅಲಿಯಾಸ್ ರೋಷನ್ ಮಾಚಂಡ (61) ಎಂಬಾತನೇ ಬಂಧಿತ ಆರೋಪಿ. ಬೆಂಗಳೂರಿನಲ್ಲಿ ನೆಲೆಸಿರುವ ಹರಮೀಂದರ್ ಕೌರ್ ಆನಂದ್ ಎಂಬುವವರು 2019ರಲ್ಲಿ ನೀಡಿದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು, ಪಂಕಜ್‌ನನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈತನಿಗೆ ನೆರವಾಗಿದ್ದ ಸುಹೈಲ್ ಚವ್ಹಾಣ್ ಹಾಗೂ ನಿತಿನ್ ವರ್ಮಾ ಎಂಬ ಲೋನ್ ಏಜೆಂಟರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಈಶಾನ್ಯ ಭಾಗದಲ್ಲಿರುವ ರಾಣಾ ಪ್ರಾತ್ ಬಾಗ್‌ನಲ್ಲಿ ಹರಮೀಂದರ್ ಕೌರ್ ಅವರು 2011ರಲ್ಲಿ ಆಸ್ತಿಯೊಂದನ್ನು ಖರೀದಿಸಿದ್ದರು. ಆದರೆ ಇವರು 2018ರಲ್ಲಿ ತಮ್ಮ ಆಸ್ತಿ ನೋಡಲು ಹೋದಾಗ, ಅಲ್ಲಿ ಏನೋ ಅಕ್ರಮ ನಡೆದಿರುವ ಕುರಿತು ಅಕ್ಕಪಕ್ಕದವರಿಂದ ಮಾಹಿತಿ ಪಡೆದಿದ್ದರು. ಜತೆಗೆ, ಸಾಲ ಮರುಪಾವತಿಗೆ ಬ್ಯಾಂಕ್ ಅಂಟಿಸಿರುವ ನೋಟಿಸ್ ಕೂಡಾ ಅಲ್ಲಿತ್ತು. ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದರು ಎಂದು ಡಿಸಿಪಿ ಅಭಿಷೇಕ್ ಧಾನಿಯಾ ತಿಳಿಸಿದ್ದಾರೆ.
‘ಬಹಳ ದಿನಗಳಿಂದ ಭೇಟಿ ನೀಡದ ಖಾಲಿ ನಿವೇಶನ, ಮನೆಯ ಮಾಲೀಕರನ್ನೇ ಗುರಿಯಾಗಿಸಿಕೊಳ್ಳುವ ಈ ತಂಡ ಅದರ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಪಡೆಯುತ್ತಿದ್ದರು. ಪಡೆದ ಸಾಲವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಿದ್ದರು. ಕೃತ್ಯ ಎಸಗಿದವರ ಪತ್ತೆಗೆ ಮುಖ ಚಹರೆ ಪತ್ತೆ ಮಾಡುವ ಎಫ್‌ಆರ್‌ಎಸ್ ತಂತ್ರಜ್ಞಾನದ ನೆರವು ಪಡೆಯಲು ನಿರ್ಧರಿಸಲಾಯಿತು. ಬ್ಯಾಂಕ್‌ಗೆ ಸಲ್ಲಿಸಿದ್ದ ಭಾವಚಿತ್ರವನ್ನು ಪಡೆದು ತಂತ್ರಾಂಶದ ಸಹಾಯದಿಂದ ಸ್ಕ್ಯಾನ್ ಮಾಡಲಾಯಿತು. ಶೇ 72ರಷ್ಟು ನಿಖರ ಮಾಹಿತಿ ಲಭ್ಯವಾಯಿತು. ಟ್ಯಾಗೋರ್ ಗಾರ್ಡನ್ ಪ್ರದೇಶದ ಪಂಕಜ್ ಸಚ್‌ದೇವ ಎಂಬಾತ ಎಂಬುದು ಖಚಿತವಾಯಿತು’ ಎಂದು ವಿವರಿಸಿದ್ದಾರೆ.
ರೋಷನ್ ಮಾಚಂಡ ಎಂಬ ನಕಲಿ ಹೆಸರು ಬಳಸಿ ಹಲವು ದಾಖಲೆಗಳನ್ನು ಸೃಷ್ಟಿಸಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಬ್ಯಾಂಕ್ ಸಾಲ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಅಕ್ರಮವಾಗಿ ಸೃಷ್ಟಿಸಿದ್ದರು. ಇಂಥದ್ದೇ ಇತರ ಮೂರು ಅಪರಾಧ ಕೃತ್ಯಗಳಲ್ಲಿ ಈತ ಭಾಗಿಯಾಗಿರುವ ಕುರಿತೂ ಡಿಸಿಪಿ ಮಾಹಿತಿ ನೀಡಿದ್ದಾರೆ.
ಎಫ್‌ಆರ್‌ಎಸ್ ತಂತ್ರಾಂಶ ನೀಡಿದ ಮಾಹಿತಿ ಆಧರಿಸಿ ಪಂಕಜ್‌ನನ್ನು ಟ್ಯಾಗೋರ್ ಗಾರ್ಡನ್ ಬಳಿ ಬಂಧಿಸಲಾಯಿತು. ವಿಚಾರಣೆ ವೇಳೆ ಈತ ನಡೆಸಿರುವ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ತನ್ನ ಕೃತ್ಯಕ್ಕೆ ₹18.4 ಲಕ್ಷ ಪಡೆದು ಸಹಕರಿಸಿದ ಸುಹೈಲ್ ಹಾಗೂ ನಿತಿನ್ ಅವರ ಹೆಸರನ್ನೂ ಹೇಳಿದ್ದಾನೆ. ಈ ಇಬ್ಬರನ್ನೂ ಕ್ರಮವಾಗಿ ಉತ್ತರ ಪ್ರದೇಶದ ಮೀರತ್ ಹಾಗೂ ಹರಿಯಾಣದ ಫರೀಬಾದ್‌ನಲ್ಲಿ ಬಂಧಿಸಲಾಗಿದೆ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.