
ಅಕೋಲ: ‘ತಮ್ಮ ಮೊಮ್ಮಗ ಪಾರ್ಥ್ ಪವಾರ್ ವಿರುದ್ಧದ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತನಿಖೆ ನಡೆಸಲಿ, ಇದರಿಂದ ಸತ್ಯ ಹೊರಬರಲಿದೆ’ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
‘ಇದು ಗಂಭೀರ ವಿಷಯ ಎಂದು ಮುಖ್ಯಮಂತ್ರಿ ಸಾರ್ವಜನಿಕವಾಗಿ ಹೇಳಿದ್ದಾರೆ. ಹೀಗಾಗಿ ಅವರು ತನಿಖೆಗೆ ಆದೇಶಿಸಬೇಕು. ಸತ್ಯ ಹೊರಬರಲಿ’ ಎಂದು ಪವಾರ್ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಪುಣೆಯ ಮುಂಧ್ವಾ ಪ್ರದೇಶದಲ್ಲಿರುವ ಸುಮಾರು ₹1,800 ಕೋಟಿ ಮೌಲ್ಯದ 40 ಎಕರೆ ಜಮೀನನ್ನು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪುತ್ರ, ಪಾರ್ಥ್ ಪವಾರ್ ಒಡೆತನದ ಕಂಪನಿ ಕೇವಲ ₹300 ಕೋಟಿಗೆ, ಮುದ್ರಾಂಕ ಶುಲ್ಕವನ್ನೂ ಪಾವತಿಸದೆ ಅಕ್ರಮವಾಗಿ ಖರೀದಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
‘ಪಾರ್ಥ್ ತಪ್ಪು ಮಾಡುತ್ತಾನೆ ಎಂದು ನನಗೆ ಅನಿಸುತ್ತಿಲ್ಲ’ ಎಂಬ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಪವಾರ್, ‘ಇದು ಅವರ ಅಭಿಪ್ರಾಯ’ ಎಂದರು.
ಸಚಿವ ಪ್ರತಾಪ್ ಸರ್ನಾಯಕ್ ವಿರುದ್ಧವೂ ತನಿಖೆಯಾಗಲಿ: ವಡೆತ್ತಿವಾರ್
ಮಹಾರಾಷ್ಟ್ರದ ಸಚಿವ ಪ್ರತಾಪ್ ಸರ್ನಾಯಕ್ ಅವರು, ಮೀರಾ–ಭಯಂದರ್‌ನಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಲು ₹200 ಕೋಟಿ ಮೊತ್ತದ 4 ಎಕರೆ ಜಮೀನನ್ನು ಕೇವಲ ₹3 ಕೋಟಿಗೆ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವಿಜಯ್ ವಡೆತ್ತಿವಾರ್ ಆರೋಪಿಸಿದ್ದಾರೆ.
ಅಜಿತ್ ಪವಾರ್ ಪುತ್ರ ಪಾರ್ಥ್ ಪವಾರ್ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದ ಬೆನ್ನಲ್ಲೇ, ವಿಜಯ್ ಈ ಆರೋಪ ಮಾಡಿದ್ದಾರೆ.
₹21 ಕೋಟಿ ಮುದ್ರಾಂಕ ಶುಲ್ಕ ವಂಚನೆ
ಅಮೇಡಿಯಾ ಎಂಟರ್‌ಪ್ರೈಸಸ್ ಎಂಬ ಕಂಪನಿಯ ಮಾಲೀಕರಾದ ಪಾರ್ಥ್ ಪವಾರ್ ಮತ್ತು ಅವರ ಸಹೋದರ ದಿಗ್ವಿಜಯ್ ಪಾಟೀಲ್ ಅವರು ಪುಣೆಯ ಮುಂಧ್ವಾ ಪ್ರದೇಶದಲ್ಲಿರುವ 40 ಎಕರೆ ಜಮೀನು ಖರೀದಿಸಲು ಶೀತಲ್ ತೇಜವಾನಿ ಎಂಬುವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.
ಸುಮಾರು 272 ಭೂ ಮಾಲೀಕರ ‘ಪವರ್ ಆಫ್ ಅಟಾರ್ನಿ’ಯನ್ನು ಶೀತಲ್ ತೇಜವಾನಿ ಹೊಂದಿದ್ದರು. ಇವರ ಬಳಿಯಿಂದ 40 ಎಕರೆಯನ್ನು ₹300 ಕೋಟಿಗೆ ಖರೀದಿಸಿದ್ದರು. ₹300 ಕೋಟಿಗೆ ಶೇ 7ರಷ್ಟು ಮುದ್ರಾಂಕ ಶುಲ್ಕವಾಗಿ ₹21 ಕೋಟಿ ಪಾವತಿಸಬೇಕು. ಇದನ್ನು ಪಾವತಿಸಿರಲಿಲ್ಲ. ತನಿಖೆಯ ನಂತರ ಈ ಖರೀದಿ ಒಪ್ಪಂದ ರದ್ದುಗೊಂಡರೆ ದುಪ್ಪಟ್ಟು ಮುದ್ರಾಂಕ ಶುಲ್ಕ ಅಂದರೆ ₹42 ಕೋಟಿ ಪಾವತಿಸಬೇಕಾಗುತ್ತದೆ.
ಭೂಕಬಳಿಕೆ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು– ದೇವೇಂದ್ರ ಫಡಣವೀಸ್ ಮಹಾರಾಷ್ಟ್ರ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.