ADVERTISEMENT

₹ 110 ಶುಲ್ಕ ಪಾವತಿಸಲು ವಿಫಲ: ಅಂತರ್-ಧರ್ಮೀಯ ವಿವಾಹ ನೋಂದಣಿ ವಿಳಂಬ

ಪಿಟಿಐ
Published 9 ಆಗಸ್ಟ್ 2021, 8:24 IST
Last Updated 9 ಆಗಸ್ಟ್ 2021, 8:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಚ್ಚಿ, ಕೇರಳ: ವಿಶೇಷ ವಿವಾಹ ಕಾಯ್ದೆಯಡಿ ವಿಶೇಷ ಶುಲ್ಕ ₹110 ಯನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ವಿಫಲವಾಗಿದ್ದರಿಂದ ಅಂತರ್-ಧರ್ಮೀಯ ಯುವಕ–ಯುವತಿ ವಿವಾಹ ನೋಂದಣಿಯು ವಿಳಂಬವಾದ ಘಟನೆ ಕೇರಳದಲ್ಲಿ ನಡೆದಿದೆ.

‘ಕೇರಳ ವಿಶೇಷ ಮದುವೆ ಕಾಯ್ದೆಯಡಿ ಮದುವೆಯ ಉದ್ದೇಶಿತ ನೋಟಿಸ್‌ ಜತೆ ಕಡ್ಡಾಯವಾಗಿ ಶುಲ್ಕವನ್ನು ಪಾವತಿಸಬೇಕಾಗಿದೆ. ಆದರೆ ಈ ಜೋಡಿಯು ಜೂನ್ 11 ರಂದು ಅಧಿಕಾರಿಗೆ ಉದ್ದೇಶಿತ ವಿವಾಹದ ನೋಟಿಸ್‌ ನೀಡಿದ್ದರು. ಅದರೊಂದಿಗೆ ಅಗತ್ಯ ಶುಲ್ಕವನ್ನು ಪಾವತಿಸಿರಲಿಲ್ಲ. ಹಾಗಾಗಿ ಅಧಿಕಾರಿಯು ಮದುವೆಗೆ ಸಂಬಂಧಿಸಿದ ನೋಟಿಸ್‌ ಅನ್ನು ಹೊರಡಿಸಿಲ್ಲ. ಈ ಬಗ್ಗೆ ಯುವಕ– ಯುವತಿಗೆ ಒಂದು ವಾರದ ಬಳಿಕ ತಿಳಿದಿದೆ’ ಎಂದು ಇವರ ಪರ ವಕೀಲ ಆರ್‌. ರಾಜೇಶ್‌ ಅವರು ಪಿಟಿಐಗೆ ತಿಳಿಸಿದರು.

ಇವರು ಜುಲೈ 9ರಂದು ವಿಶೇಷ ಶುಲ್ಕವನ್ನು ಪಾವತಿ ಮಾಡಿದ್ದಾರೆ. ಮದುಮಗಳು ಆಗಸ್ಟ್‌ 5ರಂದು ಸೌದಿ ಅರೇಬಿಯಾಗೆ ವಾಪಾಸು ಹೋಗಬೇಕಾದ ಕಾರಣ ಮದುವೆಯನ್ನು ಆಗಸ್ಟ್‌ 5ಕ್ಕಿಂತ ಮುನ್ನ ನಿಗದಿ ಮಾಡುವಂತೆ ಅವರು ಮದುವೆ ಅಧಿಕಾರಿಯ ಬಳಿ ಮನವಿ ಮಾಡಿದ್ದರು. ಆದರೆ ನಿಯಮಗಳ ಪ್ರಕಾರ ಮದುವೆಯ ಉದ್ಧೇಶಿತ ನೋಟಿಸ್‌ ನೀಡಿದ 30 ದಿನಗಳ ಬಳಿಕವೇ ಮದುವೆ ನೋಂದಣಿಗೆ ದಿನ ನಿಗದಿ ಮಾಡಲಾಗುತ್ತದೆ. ಹಾಗಾಗಿ ವಿವಾಹ ಅಧಿಕಾರಿಯು ಈ ಮನವಿ ತಿರಸ್ಕರಿಸಿದ್ದರು.

ADVERTISEMENT

ಈ ಹಿನ್ನೆಲೆಯಲ್ಲಿ ಇವರು ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯದಿಂದಲೂ ಅವರಿಗೇ ಯಾವುದೇ ಪರಿಹಾರ ಸಿಕ್ಕಿಲ್ಲ.

‘ವಿವಾಹದ ಉದ್ದೇಶಿತ ನೋಟಿಸ್‌ನೊಂದಿಗೆ ವಿಶೇಷ ಶುಲ್ಕ ಪಾವತಿಸುವಂತೆ ಕೇರಳ ವಿಶೇಷ ವಿವಾಹ ಕಾಯ್ದೆಯ 1958ನೇ ನಿಯಮದಲ್ಲಿ ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ಈ ಮನವಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.