
ಜೈಪುರ: ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ತನ್ನನ್ನು ಐಪಿಎಸ್ ಅಧಿಕಾರಿ ಎಂದು ಬಿಂಬಿಸಿಕೊಂಡು ಮಹಿಳೆಯೊಬ್ಬರನ್ನು ಮದುವೆಯಾಗಿ ವಂಚಿಸಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ.
ಆರೋಪಿಯಾದ ಅಕ್ಷತ್ ಕೊಠಾರಿಯನ್ನು ಮಧ್ಯಪ್ರದೇಶದ ಇಂದೋರ್‌ನಲ್ಲಿ ಬಂಧಿಸಲಾಗಿದೆ. ಆತ, ಕಳೆದ ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಪದೇ ಪದೇ ವಾಸಸ್ಥಳ ಬದಲಾವಣೆ ಮಾಡುತ್ತಿದ್ದ. ಆತನನ್ನು ಹುಡುಕಿಕೊಟ್ಟವರಿಗೆ ₹10 ಸಾವಿರ ಬಹುಮಾನ ಘೋಷಿಸಲಾಗಿತ್ತು ಎಂದು ಹೇಳಿದ್ದಾರೆ.
ಆರೋಪಿಯು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪೋಟೋ ಹಾಗೂ ಸುಳ್ಳು ಮಾಹಿತಿಯನ್ನು ಹಂಚಿಕೊಂಡು ತಾನು ಐಪಿಎಸ್ ಅಧಿಕಾರಿ ಎಂದು ಜನರನ್ನು ನಂಬಿಸಿದ್ದಾನೆ. ನಕಲಿ ಗುರುತಿನ ಮೂಲಕ ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಮಹಿಳೆಯೊಬ್ಬರನ್ನು ಮದುವೆಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ವಿಚಾರಣೆಯ ವೇಳೆ, ಆರೋಪಿಯ ಮೇಲೆ ವಿವಿಧ ಕಡೆಗಳಲ್ಲಿ 19ಕ್ಕೂ ಅಧಿಕ ವಂಚನೆಯ ಪ್ರಕರಣಗಳು ದಾಖಲಾಗಿರುವುದು ಪತ್ತೆಯಾಗಿದೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.