ADVERTISEMENT

ಕೃಷಿ ಮಸೂದೆ ವಿರೋಧಿಸಿ ಪಂಜಾಬ್‌ನಲ್ಲಿ ‘ರೈಲು ತಡೆ’ ಚಳವಳಿ

ವಿವಿಧ ರೈತ ಸಂಘಟನೆಗಳಿಂದ ಧರಣಿ

ಪಿಟಿಐ
Published 26 ಸೆಪ್ಟೆಂಬರ್ 2020, 4:06 IST
Last Updated 26 ಸೆಪ್ಟೆಂಬರ್ 2020, 4:06 IST
ಅಮೃತಸರ ಸಮೀಪದ ದೇವಿದಾಸಪುರದಲ್ಲಿ ರೈತ ಸಂಘಟನೆಗಳ ಕಾರ್ಯಕರ್ತರು ರೈಲ್ವೆ ಹಳಿಗಳ ಮೇಲೆ ಮಲಗಿ ಗುರುವಾರ ಪ್ರತಿಭಟನೆ ನಡೆಸಿದರು
ಅಮೃತಸರ ಸಮೀಪದ ದೇವಿದಾಸಪುರದಲ್ಲಿ ರೈತ ಸಂಘಟನೆಗಳ ಕಾರ್ಯಕರ್ತರು ರೈಲ್ವೆ ಹಳಿಗಳ ಮೇಲೆ ಮಲಗಿ ಗುರುವಾರ ಪ್ರತಿಭಟನೆ ನಡೆಸಿದರು   

ಚಂಡೀಗಡ/ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮಸೂದೆಗಳನ್ನು ವಿರೋಧಿಸಿ ಪಂಜಾಬ್‌ನಲ್ಲಿ ಗುರುವಾರದಿಂದ ಮೂರು ದಿನಗಳ ‘ರೈಲ್ ರೋಕೊ’ ಆರಂಭವಾಗಿದೆ. ಇದರ ಜೊತೆಗೆ ಸೆ.25ರಂದು ಪಂಜಾಬ್ ಸಂಪೂರ್ಣ ಬಂದ್‌ಗೆ 31 ರೈತ ಸಂಘಟನೆಗಳು ಕರೆ ನೀಡಿವೆ.

ರೈಲ್‌ ರೋಕೊಗೆ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಕರೆ ಕೊಟ್ಟಿದೆ. ಇದಕ್ಕೆ ವಿವಿಧ ರೈತ ಸಂಘಟನೆಗಳು ಬೆಂಬಲ ನೀಡಿವೆ. ಭಾರತೀಯ ಕಿಸಾನ್ ಯೂನಿಯನ್ ಕಾರ್ಯಕರ್ತರು ಗುರುವಾರ ಬೆಳಿಗ್ಗೆ ಬರ್ನಾಲಾ ಮತ್ತು ಸಂಗ್ರೂರ್‌ನಲ್ಲಿ ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.

ಅಮೃತಸರ ಸಮೀಪದ ದೇವಿದಾಸಪುರ ಗ್ರಾಮ ಹಾಗೂ ಫೆರೋಜ್‌ಪುರದ ಬಸ್ತಿ ಟಂಕವಾಲಾದಲ್ಲಿ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ರೈಲು ತಡೆ ನಡೆಸಿತು. ಸರ್ಕಾರಿ ನೌಕರರು ಹಾಗೂ ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳಿಂದ ತಮಗೆ ಬೆಂಬಲ ಸಿಕ್ಕಿದೆ ಎಂದು ಸಮಿತಿಯ ಪದಾಧಿಕಾರಿಗಳು ಹೇಳಿಕೊಂಡಿದ್ದಾರೆ.

ADVERTISEMENT

ರೈತರ ಪ್ರತಿಭಟನೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಸಚಿವರು, ಸಂಸದರು ಹಾಗೂ ಶಾಸಕರು ಭಾಗಿಯಾಗಬಾರದು ಎಂದು ಸಮಿತಿಯ ಅಧ್ಯಕ್ಷ ಸತ್ನಾಮ್ ಸಿಂಗ್ ಪನ್ನು ಹೇಳಿದ್ದಾರೆ.

ಬಿಜೆಪಿ ನಾಯಕರಿಗೆ ಘೆರಾವ್ ಹಾಕಲು, ಮಸೂದೆ ಪರವಾಗಿ ಮತ ಚಲಾಯಿಸಿದವರಿಗೆ ಸಾಮಾಜಿಕ ಬಹಿಷ್ಕಾರ ಹಾಕಲು ಸಮಿತಿ ನಿರ್ಧರಿಸಿದೆ.

‘ಮಸೂದೆಯು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಕಿತ್ತುಹಾಕಲಿದ್ದು, ರೈತರು ಬೃಹತ್ ಕಾರ್ಪೊರೇಟ್‌ ಕಂಪನಿಗಳ ಮುಲಾಜಿನಲ್ಲಿ ಬದುಕಬೇಕಾಗುತ್ತದೆ’ ಎಂದು ರೈತರು ಆರೋಪಿಸಿದ್ದಾರೆ.

ರೈತರ ಹಿತ ಬಲಿಕೊಡಲು ಬಿಡೆವು: ರೈತರ ಹಿತ ಬಲಿಕೊಡಲು ಬಿಜೆಪಿ ಸರ್ಕಾರಕ್ಕೆ ಬಿಡುವುದಿಲ್ಲ ಎಂದು ಗುಜರಾತ್ ಕಾಂಗ್ರೆಸ್ ಘಟಕ ಗುರುವಾರ ಹೇಳಿದೆ.

ಸರಣಿ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಿರುವ ಪಕ್ಷ, ಮೊದಲಿಗೆ ಸೆ.26ರಂದು ‘ರೈತರ ಪರವಾಗಿ ಮಾತನಾಡಿ’ ಎಂಬಆನ್‌ಲೈನ್‌ ಕಾರ್ಯಕ್ರಮ ಹಮ್ಮಿಕೊಂಡಿದೆ. ನಂತರ ಸೆ.28ರಂದು ರಾಜಭವನದವರೆಗೆ ಮೆರವಣಿಗೆ ನಡೆಸಲು ನಿರ್ಧರಿಸಿದೆ. ಅ. 2ರಂದು ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ, ಧರಣಿ ನಡೆಸಲು ತೀರ್ಮಾನಿಸಲಾಗಿದೆ.

ಸರಕು ಪೂರೈಕೆಗೆ ಅಡ್ಡಿ ಸಾಧ್ಯತೆ
ಪಂಜಾಬ್‌ನಲ್ಲಿ ರೈತರ ಪ್ರತಿಭಟನೆಯಿಂದ ಸರಕು ಸಾಗಣೆ ಹಾಗೂ ವಿಶೇಷ ರೈಲುಗಳ ಓಡಾಟದ ಮೇಲೆ ಪರಿಣಾಮ ಬೀರಲಿದ್ದು,ಆಹಾರ ಧಾನ್ಯಗಳ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಸೆ.24ರಿಂದ 26ರವರೆಗೆ ಸುಮಾರು 20 ರೈಲುಗಳ ಸಂಚಾರ ಭಾಗಶಃ ರದ್ದುಗೊಂಡಿದ್ದು, ಐದು ರೈಲುಗಳ ಓಡಾಟವನ್ನು ಅಲ್ಪ ಅವಧಿಯವರೆಗೆ ತಡೆಹಿಡಿಯಲಾಗಿದೆ.

ಯಾವುದೇ ಅಹಿತಕರ ಘಟನೆ ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆ ಹೇಳಿದೆ.

ರಾಜ್ಯಕ್ಕೆ ಪ್ರತಿನಿತ್ಯ 20 ರೇಕ್‌ ಗಳಷ್ಟು ಕಲ್ಲಿದ್ದಲು, ಆಹಾರ ಧಾನ್ಯ, ಕೃಷಿ ಉಪಕರಣ, ಯಂತ್ರೋಪಕರಣ, ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಆಮದು ರಸಗೊಬ್ಬರಗಳು ರೈಲುಗಳ ಮೂಲಕ ಪೂರೈಕೆಯಾಗುತ್ತವೆ. ರೈಲು ತಡೆಯಿಂದ ಇವುಗಳ ಸಾಗಣೆಗೆ ತೀವ್ರ ತರದ ತೊಂದರೆಯಾಗಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

**
ಕಾಯ್ದೆ ಜಾರಿಗೆ ಮುನ್ನ ರಾಜ್ಯ ಸರ್ಕಾರ, ರೈತರು, ರೈತ ಸಂಘಟನೆಗಳು, ಆರ್‌ಎಸ್‌ಎಸ್‌ ಜತೆಗಿನ ಸಂಘಟನೆಗಳನ್ನು ಕೇಂದ್ರ ಸರ್ಕಾರ ಸಂಪರ್ಕಿಸಿಲ್ಲ.
-ರಾಜೀವ್ ಸತವ್, ಕಾಂಗ್ರೆಸ್‌ನ ಗುಜರಾತ್ ಘಟಕದ ಉಸ್ತುವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.