ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ 40 ರೈತ ಸಂಘಟನೆಗಳನ್ನು ಮುಂದಿನ ಸುತ್ತಿನ ಮಾತುಕತೆಗೆ ಕೇಂದ್ರ ಸರ್ಕಾರ ಸೋಮವಾರ ಆಹ್ವಾನ ನೀಡಿದೆ. ಮೂರು ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ವಿರೋಧಗಳಿಗೆ ತಾರ್ಕಿಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಡಿಸೆಂಬರ್ 30ರಂದು ಸಭೆಗೆ ಕರೆಯಲಾಗಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ಡಿಸೆಂಬರ್ 30ರಂದು ಮಧ್ಯಾಹ್ನ 2 ಗಂಟೆಗೆ ಸಭೆಗೆ ಬರುವಂತೆ ಕೃಷಿ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಅಗರ್‌ವಾಲ್ ಅವರು ರೈತ ಸಂಘಗಳಿಗೆ ಪತ್ರ ಮುಖೇನ ತಿಳಿಸಿದ್ದಾರೆ.
ಡಿಸೆಂಬರ್ 29ರಂದು ಮಾತುಕತೆ ನಡೆಸುವಂತೆ ಸರ್ಕಾರಕ್ಕೆ ರೈತ ಸಂಘಟನೆಗಳು ಪ್ರಸ್ತಾವನೆ ಸಲ್ಲಿಸಿದ್ದವು.
ಈವರೆಗೂ ಕೃಷಿ ಕಾಯ್ದೆ ವಿಚಾರವಾಗಿ 40 ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಅಧಿಕೃತವಾಗಿ ಐದು ಸುತ್ತಿನ ಮಾತುಕತೆ ನಡೆದಿದ್ದು, ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
'ಸಂಬಂಧಿತ ಎಲ್ಲ ಸಮಸ್ಯೆಗಳಿಗೂ ತಾರ್ಕಿಕ ಪರಿಹಾರ ಕಂಡುಕೊಳ್ಳಲು ಸರ್ಕಾರ ಸಹ ಬದ್ಧವಾಗಿದೆ, ಮುಕ್ತ ಮನಸ್ಸಿನಿಂದ ಮಾತುಕತೆಗೆ ಸಿದ್ಧವಿದೆ ' ಎಂದು ಅಗರ್‌ವಾಲ್ ಹೇಳಿದ್ದಾರೆ.
ಸುಮಾರು ಒಂದು ತಿಂಗಳಿನಿಂದ ಹರಿಯಾಣ, ಪಂಜಾಬ್ ಹಾಗೂ ಉತ್ತರ ಪ್ರದೇಶದ ಸಾವಿರಾರು ರೈತರು ದೆಹಲಿಯ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ಆಗ್ರಹಿಸಿದ್ದಾರೆ. ಬೇಡಿಕೆಗಳು ಈಡೇರದಿದ್ದರೆ ಪ್ರತಿಭಟನೆ ಮತ್ತಷ್ಟು ತೀಕ್ಷ್ಣಗೊಳಿಸುವುದಾಗಿ ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.