ಸತ್ನಾ: ಮಧ್ಯಪ್ರದೇಶ ಸತ್ನಾ ಜಿಲ್ಲೆಯ ರೈತನೊಬ್ಬನ ವಾರ್ಷಿಕ ಆದಾಯವು ಕೇವಲ ₹3 ಎಂದು ದಾಖಲಾಗಿರುವ ಪ್ರಮಾಣಪತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.
ಜಿಲ್ಲೆಯ ನಾಯಗಾಂವ ಗ್ರಾಮದ ನಿವಾಸಿ, 45 ವರ್ಷದ ರಾಮಸ್ವರೂಪ ಎಂಬವರ ಆದಾಯ ಪ್ರಮಾಣಪತ್ರ ಇದಾಗಿದೆ. ಪ್ರಮಾಣಪತ್ರಕ್ಕೆ ತಹಶೀಲ್ದಾರ್ ಸೌರಭ್ ದ್ವಿವೇದಿ ಸಹಿ ಹಾಕಿದ್ದಾರೆ.
ಈ ಪ್ರಮಾಣ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನೆಟ್ಟಿಗರು, ರೈತ ರಾಮಸ್ವರೂಪ ಅವರನ್ನು ‘ದೇಶದ ಅತ್ಯಂತ ಬಡ ವ್ಯಕ್ತಿ’ ಎಂದು ಕರೆದಿದ್ದಾರೆ.
ಸುದ್ದಿ ವ್ಯಾಪಕವಾಗಿ ಹರಿದಾಡಿದ ಬಳಿಕ ಎಚ್ಚೆತ್ತ ಆಡಳಿತವು, ಸರಿಯಾದ ಮಾಹಿತಿಯೊಂದಿಗಿನ ಹೊಸ ಪತ್ರವನ್ನು ಜುಲೈ 25ರಂದು ರೈತನಿಗೆ ವಿತರಿಸಿದೆ.
‘ಬರವಣಿಗೆ ವೇಳೆ ಉಂಟಾದ ದೋಷದಿಂದ ₹30 ಸಾವಿರ ಎಂದು ಇರಬೇಕಿದ್ದ ಪತ್ರದಲ್ಲಿ ₹3 ಎಂದು ನಮೂದು ಮಾಡಲಾಗಿದೆ. ತಕ್ಷಣ ಅದನ್ನು ಸರಿಪಡಿಸಿ ಹೊಸ ಪತ್ರವನ್ನು ರೈತನಿಗೆ ವಿತರಿಸಲಾಗಿದೆ’ ಎಂದು ದ್ವಿವೇದಿ ಸ್ಪಷ್ಟಪಡಿಸಿದ್ದಾರೆ.
ಏತನ್ಮಧ್ಯೆ, ಇದೇ ವಿಚಾರವನ್ನು ಇಟ್ಟುಕೊಂಡು ಸರ್ಕಾರವನ್ನು ಟೀಕಿಸಿರುವ ರಾಜ್ಯ ಕಾಂಗ್ರೆಸ್ ಘಟಕ, ‘ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಆಳ್ವಿಕೆಯಲ್ಲಿ ನಾವು ದೇಶದ ಅತ್ಯಂತ ಬಡ ವ್ಯಕ್ತಿಯನ್ನು ಕಂಡುಕೊಂಡೆವು’ ಎಂದು ಲೇವಡಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.