
ಸಾಂದರ್ಭಿಕ ಚಿತ್ರ
(ಎ.ಐ ಚಿತ್ರ)
ಪಾಲ್ಘರ್(ಮಹಾರಾಷ್ಟ್ರ): ತಕ್ಷಣ ವಿಮಾ ಪರಿಹಾರ ನೀಡುವಂತೆ ಆಗ್ರಹಿಸಿ ರೈತನೊಬ್ಬ ತನ್ನ ಸತ್ತ ಎಮ್ಮೆಯನ್ನು ರಾಷ್ಟ್ರೀಕೃತ ಬ್ಯಾಂಕಿನ ಹೊರಗೆ ಇಟ್ಟು ಪ್ರತಿಭಟಿಸಿದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಒಂದು ತಿಂಗಳೊಳಗೆ ಪರಿಹಾರ ನೀಡಲಾಗುವುದು ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ಭರವಸೆ ನೀಡಿದ ಬಳಿಕ ರೈತ ಸುಮಾರು 10 ನಿಮಿಷಗಳ ಕಾಲ ನಡೆಸಿದ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಂಕಿನ ಪ್ರವೇಶದ್ವಾರದ ಹೊರಗೆ ಎಮ್ಮೆಯ ಕಳೇಬರ ಬಿದ್ದಿರುವುದನ್ನು ತೋರಿಸುವ ಮತ್ತು ಪ್ರತಿಭಟನೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು.
ಜಿಲ್ಲೆಯ ತಕ್ಪಾಡಾ ಗ್ರಾಮದ ರೈತ ನವಸು ದಿಘಾ ಎಂಬುವವರು, 2022ರಲ್ಲಿ ಬ್ಯಾಂಕಿನ ಮೊಖಡಾ ಶಾಖೆಯಿಂದ ₹12 ಲಕ್ಷ ಸಾಲ ಪಡೆದು 10 ಎಮ್ಮೆಗಳನ್ನು ಖರೀದಿಸಿದ್ದರು.
ಇವುಗಳಿಗೆ (ಎಮ್ಮೆ) ವಿಮೆ ಮಾಡಿಸಿದ್ದರು. ಆದರೆ ಕಳೆದ ಮೂರು ವರ್ಷಗಳಲ್ಲಿ ಮೃತಪಟ್ಟ ಎರಡು ಎಮ್ಮೆಗಳಿಗೆ ಯಾವುದೇ ವಿಮೆ ಪರಿಹಾರವನ್ನು ಪಾವತಿಸಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ದಿಘಾ ಅವರು ಶನಿವಾರ, ಎಮ್ಮೆಯ ಕಳೇಬರ ಹೊತ್ತ ಟ್ರ್ಯಾಕ್ಟರ್‌ನಲ್ಲಿ ಬಂದು ಸ್ಥಳೀಯ ಬ್ಯಾಂಕ್ ಶಾಖೆಯ ಹೊರಗೆ ವಾಹನ ನಿಲ್ಲಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಎಮ್ಮೆಗಳಿಗೆ ವಿಮೆ ಮಾಡಿಸಿದರು ಕೂಡ, ನನಗೆ ಒಂದು ರೂಪಾಯಿಯೂ ಪರಿಹಾರ ಸಿಕ್ಕಿಲ್ಲ. ಬ್ಯಾಂಕಿನ ನಿರ್ಲಕ್ಷ್ಯದಿಂದಾಗಿ, ರೈತರನ್ನು ವಂಚಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಬೇಗ ಹಣ ನೀಡದಿದ್ದರೆ, ಎಮ್ಮೆಯ ಕಳೇಬರವನ್ನು ಇಲ್ಲಿಯೇ ಬಿಡುತ್ತೇನೆ. ನನಗೆ ಹಣ ಸಿಗುವವರೆಗೂ ಬ್ಯಾಂಕ್ ಅದನ್ನು ಇಟ್ಟುಕೊಳ್ಳಲಿ ಎಂದೂ ಅವರು ಎಚ್ಚರಿಸಿದ್ದಾರೆ.
ಸ್ಥಳೀಯ ರೈತ ಮುಖಂಡರು ಮತ್ತು ರಾಜಕೀಯ ಪ್ರತಿನಿಧಿಗಳು ಕೂಡ ಪ್ರತಿಭಟನೆಯಲ್ಲಿ ಸೇರಿಕೊಂಡರು. ಬಳಿಕ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ, ದಿಘಾ ಮತ್ತು ಇತರ ರೈತರಿಗೆ ಪರಿಹಾರವನ್ನು ವಿಮಾ ಕಂಪನಿಯ ಮೂಲಕ 31 ದಿನಗಳಲ್ಲಿ ನೀಡಲಾಗುವುದು ಎಂದು ಲಿಖಿತ ಭರವಸೆ ನೀಡಿದ್ದಾರೆ. ಬಳಿಕ ದಿಘಾ ಅವರು ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ. ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿಯೂ ಅವರು ಎಚ್ಚರಿಸಿದ್ದಾರೆ.
ಬ್ಯಾಂಕ್ ಲಿಖಿತ ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಗೊಂಡಿತು. ರೈತ ತನ್ನ ಎಮ್ಮೆಯ ಕಳೇಬರದೊಂದಿಗೆ ಹಿಂತಿರುಗಿದ್ದಾನೆ ಎಂದು ಮೊಖಡಾದ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಪ್ರೇಮನಾಥ್ ಧೋಲೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.