ADVERTISEMENT

ರೈತರಿಗೆ ದೆಹಲಿ ಪ್ರವೇಶ ನಿರಾಕರಣೆ: ಪೊಲೀಸರೊಂದಿಗೆ ಘರ್ಷಣೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 7:30 IST
Last Updated 2 ಅಕ್ಟೋಬರ್ 2018, 7:30 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ನವದೆಹಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ರಾಷ್ಟ್ರ ರಾಜಧಾನಿ ಪ್ರವೇಶಿಸಲು ಯತ್ನಿಸಿದಾಗ ಪೊಲೀಸರು ಬಲಪ್ರಯೋಗಿಸಿ ಅವರನ್ನು ಉತ್ತರಪ್ರದೇಶ ಗಡಿಯಲ್ಲಿಯೇ ತಡೆದರು. ಈ ಸಂದರ್ಭ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯಿತು. ದೆಹಲಿ ಗಡಿಯಲ್ಲಿ ಜಮೆಯಾಗಿರುವ ಸುಮಾರು 20 ಸಾವಿರ ರೈತರನ್ನು ತಡೆದು ನಿಲ್ಲಿಸಲು ಭಾರಿ ಸಂಖ್ಯೆ ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.

ಸಾಲಮನ್ನಾ ಸೇರಿದಂತೆ ಒಟ್ಟು 15 ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲೆಂದು ರೈತರು ದೆಹಲಿಗೆ ಬರುತ್ತಿದ್ದರು.ರೈತರ ಜಾಥಾ ತಡೆಯಲೆಂದು ಪೊಲೀಸರು ಜಲಫಿರಂಗಿ ಬಳಸಿದರು. ಆಶ್ರುವಾಯು ಸಿಡಿಸಿದರು. ‘ತಮ್ಮದಾರಿಗೆ ಅಡ್ಡಲಾಗಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರಿಂದ ಸಿಟ್ಟಿಗೆದ್ದ ರೈತರು ಕಲ್ಲುತೂರಾಟ ನಡೆಸಿದರು. ಇದರಿಂದ ಶಕ್ತಿಪ್ರಯೋಗ ಅನಿವಾರ್ಯವಾಯಿತು’ ಎಂದು ಪೊಲೀಸರು ಹೇಳಿದ್ದಾರೆ.

‘ಕಿಸಾನ್ ಕ್ರಾಂತಿ ಯಾತ್ರಾ’ ಪ್ರಯುಕ್ತ ರೈತರು ಸೋಮವಾರವೇ ದೆಹಲಿ ಹೊರವಲಯದ ಸಹೀಬಾಬಾದ್‌ಗೆ ಬಂದಿದ್ದರು. ದೆಹಲಿಯ ಕಿಸಾನ್‌ ಘಾಟ್ ತಲುಪಬೇಕೆಂದು ಹರಿದ್ವಾರದಿಂದ ರೈತರು ಜಾಥಾ ಆರಂಭಿಸಿದ್ದರು. ರೈತರು ದೆಹಲಿ ತಲುಪದಂತೆ ತಡೆಯಲು ಉತ್ತರ ಪ್ರದೇಶ ಸರ್ಕಾರವು ಭಾರಿಸಂಖ್ಯೆಯಲ್ಲಿ ಪೊಲೀಸ್ ಮತ್ತು ಅರೆಸೇನಾಪಡೆ ತುಕಡಿಗಳನ್ನು ನಿಯೋಜಿಸಿತ್ತು.

ADVERTISEMENT

ರೈತರ ವಿರುದ್ಧ ಪೊಲೀಸ್ ಕ್ರಮ ಖಂಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ‘ರೈತರು ದೆಹಲಿ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕು. ಅವರಿಗೆ ಪ್ರವೇಶ ನಿರಾಕರಿಸುದು ತಪ್ಪು. ನಾವು ರೈತರ ಜೊತೆಗೆ ಇದ್ದೇವೆ’ ಎಂದು ಟ್ವೀಟ್ ಮಾಡಿದ್ದರು.

‘ರೈತರಿಗೆ ದೆಹಲಿ ಪ್ರವೇಶಿಸಲು ಅವಕಾಶಕೊಡುವುದಿಲ್ಲ’ ಎಂದು ಘರ್ಷಣೆ ಆರಂಭವಾಗುವ ಕೆಲವೇ ಕ್ಷಣಗಳ ಮೊದಲು ಹಿರಿಯ ಅಧಿಕಾರಿಗಳು ಹೇಳಿದ್ದರು. ದೆಹಲಿ ಪ್ರವೇಶಿಸದಂತೆ ರೈತರ ಮನವೊಲಿಸುವ ಪೊಲೀಸರ ಯತ್ನವೂ ವಿಫಲವಾಯಿತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಸೋಮವಾರ ರೈತರ ನಿಯೋಗವನ್ನು ಭೇಟಿಯಾಗಿ ದೆಹಲಿ ಪ್ರವೇಶಿಸದಂತೆ ಮನವೊಲಿಸಲು ಯತ್ನಿಸಿದರು.

‘ಸ್ವಾಮಿನಾಥನ್ ಸಮಿತಿ ವರದಿಯನ್ನು ಶೀಘ್ರ ಜಾರಿಮಾಡಬೇಕು, ಸಕ್ಕರೆ ಕಾರ್ಖಾನೆಗಳು ಕಬ್ಬುಪೂರೈಕೆಯ ಬಾಕಿ ಹಣವನ್ನು ಪಾವತಿಸಬೇಕು, ಕೃಷಿಸಾಲ ಮನ್ನಾ ಮತ್ತು ಬೇಸಾಯದ ಕೊಳವೆಬಾವಿಗಳಿಗೆ ಉಚಿತ ವಿದ್ಯುತ್ ನೀಡಬೇಕು’ ಎಂದು ಆಗ್ರಹಿಸಿ ರೈತರು ಜಾಥಾ ನಡೆಸುತ್ತಿದ್ದಾರೆ.

‘ಎಲ್ಲ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಸಲವತ್ತು ಸಿಗಬೇಕು. ವಿಮೆಯ ಕಂತನ್ನು ಸರ್ಕಾರವೇ ಪಾವತಿಸಬೇಕು. ರೈತರಿಗೆ ಕನಿಷ್ಠ ಆದಾಯದ ಖಾತ್ರಿ ನೀಡಬೇಕು. 60 ವರ್ಷ ದಾಟಿದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ₹5 ಸಾವಿರ ಪಿಂಚಣಿ ನೀಡಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು.ರಾಜಧಾನಿ ವಲಯದಲ್ಲಿ 10 ವರ್ಷ ಹಳೆಯದಾದ ಡೀಸೆಲ್ ವಾಹನಗಳು ಬಳಸುವಂತಿಲ್ಲ ಎನ್ನುವ ನಿಯಮದಿಂದ ಟ್ರಾಕ್ಟರ್‌ಗಳಿಗೆ ವಿನಾಯಿತಿ ಕೊಡಬೇಕು’ ಎಂಬುವು ರೈತರ ಪ್ರಮುಖ ಬೇಡಿಕೆಗಳಾಗಿವೆ.

*

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.