ADVERTISEMENT

ಮೋದಿಯಿಂದ ಪದೇ ಪದೇ ದ್ರೋಹ, ನ್ಯಾಯ ಕೇಳುತ್ತಿರುವ ರೈತರು:‍ ಮಲ್ಲಿಕಾರ್ಜುನ ಖರ್ಗೆ

ಪಿಟಿಐ
Published 9 ಡಿಸೆಂಬರ್ 2024, 10:00 IST
Last Updated 9 ಡಿಸೆಂಬರ್ 2024, 10:00 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರಿಗೆ ಪದೇಪದೇ ವಿಶ್ವಾಸದ್ರೋಹ ಎಸಗಿದೆ. ಹೀಗಾಗಿ, ರೈತರು ದೆಹಲಿಗೆ ಬಂದು ನ್ಯಾಯಕ್ಕಾಗಿ ಹೋರಾಡುತ್ತಿದ್ದು, ಅವರ ಧ್ವನಿ ಅಡಗಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ.

‘ಎಕ್ಸ್‌’ನಲ್ಲಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ರೈತರು ಪದೇಪದೇ ದೆಹಲಿಗೆ ಬಂದು ನ್ಯಾಯಕ್ಕಾಗಿ ಹೋರಾಡುವ ಅಗತ್ಯವೇನಿದೆ ಎಂಬುದರ ಅರಿವಿದೆಯೇ’ ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ. 

‘2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದಿರಿ. ಸ್ವಾಮಿನಾಥನ್‌ ಆಯೋಗದ ಶಿಫಾರಸಿನಂತೆ, ಉತ್ಪಾದನಾ ವೆಚ್ಚದ ಜೊತೆಗೆ ಶೇ 50ರಷ್ಟು ಲಾಭಾಂಶ ಸೇರಿಸಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸುವುದಾಗಿ ಹಾಗೂ ಎಂಎಸ್‌ಪಿಗೆ ಕಾನೂನು ಮಾನ್ಯತೆ ನೀಡುವುದಾಗಿಯೂ ಹೇಳಿದ್ದಿರಿ. ಆದರೆ ಈ ಯಾವ ಆಶ್ವಾಸನೆಗಳನ್ನೂ ಕೇಂದ್ರ ಸರ್ಕಾರ ಈಡೇರಿಸಿಲ್ಲ. ಹೀಗಾಗಿಯೇ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ಖರ್ಗೆ ಹೇಳಿದ್ದಾರೆ.

ADVERTISEMENT

ಕೃಷಿ ಉತ್ಪನ್ನಗಳಿಗೆ ನ್ಯಾಯಯುತವಾದ ಬೆಲೆ ಸಿಗುತ್ತಿಲ್ಲ. ಅದಕ್ಕೂ ಮೀರಿ, ದೇಶದಲ್ಲಿ ಡಿಎಪಿ ಸೇರಿ ರಸಗೊಬ್ಬರಗಳ ತೀವ್ರ ಅಭಾವ ಉಂಟಾಗಿದೆ ಎಂದು ಖರ್ಗೆ ದೂರಿದ್ದಾರೆ.

ರೈತರ ಹಾದಿಗೆ ಮುಳ್ಳುತಂತಿಯ ಬಲೆ: ರಾಷ್ಟ್ರ ರಾಜಧಾನಿ ದೆಹಲಿಗೆ ಶಾಂತಿಯುತ ಮೆರವಣಿಗೆ ಕೈಗೊಂಡಿರುವ ರೈತರನ್ನು ತಡೆಯಲು ದೆಹಲಿಯ ಹೊರಭಾಗದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ರೈತರ ಹಾದಿಗೆ ಮುಳ್ಳುತಂತಿಯ ಬಲೆ ಹಾಸಿ, ಅವರ ಮೇಲೆ ಅಶ್ರುವಾಯು ಸಿಡಿಸಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ ಎಂದು ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

‘ರೈತರ ಪಾಲಿನ ಪರಮಶತ್ರು’
‘ಸ್ವತಃ ಪ್ರಧಾನಿಯವರೇ ಲೋಕಸಭೆಯಲ್ಲಿ ರೈತರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. 750 ಹುತಾತ್ಮ ರೈತರ ಸ್ಮರಣಾರ್ಥ ಎರಡು ನಿಮಿಷ ಮೌನಾಚರಣೆ ಮಾಡಬೇಕೆಂಬ ಮನವಿಯನ್ನೂ ಕಡೆಗಣಿಸಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಪ್ರಧಾನಿಯೇ ಆಗಲಿ ಕೇಂದ್ರ ಕೃಷಿ ಸಚಿವರೇ ಆಗಲಿ ಎಷ್ಟೇ ಸುಳ್ಳುಗಳನ್ನು ಹೇಳಿದರೂ ರೈತರು ನಂಬುವುದಿಲ್ಲ. ಅವರ ಪರಮಶತ್ರುಗಳು ನೀವೇ ಎಂಬುದನ್ನು ರೈತರು ಅರ್ಥೈಸಿಕೊಂಡಿದ್ದಾರೆ’ ಎಂದು ಖರ್ಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.