ADVERTISEMENT

ಕೃಷಿ ಕಾಯ್ದೆ ವಿರೋಧಿಸಿ ಭಾರತ್‌ ಬಂದ್‌: ಹಲವೆಡೆ ರೈಲು, ರಸ್ತೆ ಸಂಚಾರಕ್ಕೆ ಅಡ್ಡಿ

ಏಜೆನ್ಸೀಸ್
Published 26 ಮಾರ್ಚ್ 2021, 5:36 IST
Last Updated 26 ಮಾರ್ಚ್ 2021, 5:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಇಂದು (ಶುಕ್ರವಾರ) ಭಾರತ್‌ ಬಂದ್‌ಗೆ ಕರೆ ನೀಡಿದ ಬೆನ್ನಲ್ಲೇ ದೇಶದ ಹಲವೆಡೆ ಪ್ರತಿಭಟನೆಗಳು ಆರಂಭಗೊಂಡಿವೆ.

ಅಮೃತಸರ ಸೇರಿದಂತೆ ಪಂಜಾಬ್‌ನ ಹಲವು ನಗರಗಳಲ್ಲಿ ರೈಲುಗಳ ಸಂಚಾರಕ್ಕೆ ಪ್ರತಿಭಟನಾಕಾರರು ಅಡ್ಡಿಪಡಿಸಿದ್ದಾರೆ.

ದೆಹಲಿಯ ಗಾಜಿಪುರ, ಸಿಂಘು ಗಡಿಗಳಲ್ಲಿ ಧರಣಿ ನಡೆಸುತ್ತಿರುವ ರೈತರು ನೃತ್ಯ ಮಾಡುವ ಮೂಲಕ ವಿನೂತನ ಪ್ರತಿಭಟನೆ ಕೈಗೊಂಡಿದ್ದಾರೆ.

ADVERTISEMENT

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಎಡಪಕ್ಷಗಳ ಕಾರ್ಯಕರ್ತರು ರಸ್ತೆಗಳನ್ನು ತಡೆದು, ಕೇಂದ್ರ ಸರ್ಕಾರದ ನೀತಿಗಳ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ

ಕೇಂದ್ರ ಸರ್ಕಾರದ ಹೊಸ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿ ಭಾಗಗಳಲ್ಲಿ ನಡೆಸುತ್ತಿರುವ ರೈತರ ಪ್ರತಿಭಟನೆ ನಾಲ್ಕು ತಿಂಗಳು ಪೂರ್ಣಗೊಳಿಸುತ್ತಿರುವ ಬೆನ್ನಲ್ಲೇ ರೈತ ಸಂಘಟನೆಗಳ ಒಕ್ಕೂಟ ಬಂದ್‌ಗೆ ಕರೆ ನೀಡಿದೆ.

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದಾದ್ಯಂತ ಬೆಳಿಗ್ಗೆ 6ರಿಂದ ಸಂಜೆ 6ರವರೆಗೂ ಶಾಂತಿಯುತ ಬಂದ್ ಆಚರಿಸಲಾಗುತ್ತದೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿದೆ.

ಚುನಾವಣೆ ನಡೆಯಲಿರುವ ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ ಹಾಗೂ ಪುದುಚೇರಿಯಲ್ಲಿ ಬಂದ್‌ ಆಚರಿಸದಂತೆ ಸಂಯುಕ್ತ ಕಿಸಾನ್ ಮೋರ್ಚಾ ಜನರಲ್ಲಿ ವಿನಂತಿಸಿದೆ.

ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ಈವರೆಗೂ 11 ಸುತ್ತಿನ ಮಾತುಕತೆ ನಡೆದಿದ್ದು, ಸಮಸ್ಯೆ ಇತ್ಯರ್ಥವಾಗಿಲ್ಲ. ಹೊಸ ಕೃಷಿ ಕಾಯ್ದೆಗಳನ್ನು 12–18 ತಿಂಗಳ ವರೆಗೂ ಅಮಾನತಿನಲ್ಲಿ ಇಡುವ ಪ್ರಸ್ತಾಪವನ್ನು ಸರ್ಕಾರ ಜನವರಿಯಲ್ಲಿ ಮುಂದಿಟ್ಟಿತ್ತು. ರೈತ ಸಂಘಟನೆಗಳು ಆ ಪ್ರಸ್ತಾಪವನ್ನು ತಿರಸ್ಕರಿಸಿ ಪ್ರತಿಭಟನೆ ಮುಂದುವರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.