ADVERTISEMENT

ರೈತರೊಂದಿಗೆ ಚರ್ಚಿಸಿ ಹೊಸ ಕೃಷಿ ಕಾಯ್ದೆ ರಚಿಸಿ: ಕೇಂದ್ರಕ್ಕೆ ಪಂಜಾಬ್ ಸಿಎಂ

ಅಹಂ ಮತ್ತು ಪ್ರತಿಷ್ಠೆಯನ್ನು ಬಿಡುವಂತೆ ಕೇಂದ್ರಕ್ಕೆ ಅಮರಿಂದರ್ ಸಿಂಗ್ ಮನವಿ

ಏಜೆನ್ಸೀಸ್
Published 19 ಮಾರ್ಚ್ 2021, 4:27 IST
Last Updated 19 ಮಾರ್ಚ್ 2021, 4:27 IST
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್   

ಚಂಡೀಗಡ: ಕೇಂದ್ರ ಸರ್ಕಾರವು ಅಹಂ ಮತ್ತು ಪ್ರತಿಷ್ಠೆಯನ್ನು ಬದಿಗೊತ್ತಿ ಈ ಕೂಡಲೇ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮನವಿ ಮಾಡಿದ್ದಾರೆ. ಅಲ್ಲದೆ ರೈತರೊಂದಿಗೆ ಚರ್ಚಿಸಿ ನೂತನ ಕೃಷಿ ಕಾಯ್ದೆಯನ್ನು ರೂಪಿಸುವಂತೆ ಸಲಹೆ ಮಾಡಿದ್ದಾರೆ.

ಕೇಂದ್ರ ಸರ್ಕಾರವು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ರೈತರೊಂದಿಗೆ ಕುಳಿತು ಚರ್ಚಿಸಿ ಹೊಸ ಕೃಷಿ ಕಾಯ್ದೆಗಳನ್ನು ರಚಿಸಬೇಕು. ಇದನ್ನು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಳ್ಳುವುದರಿಂದ ಏನು ಪ್ರಯೋಜನ? ಅಲ್ಲಿ ಮಹಿಳೆಯರು ಮತ್ತು ವೃದ್ಧರೊಂದಿಗೆ ಬಡ ರೈತರು ಪ್ರತಿಭಟನೆಯಲ್ಲಿ ನಿರತವಾಗಿದ್ದಾರೆ ಎಂದು ಹೇಳಿದರು.

ಪಂಜಾನ್‌ನ 112 ರೈತರ ಸಾವು?
ರೈತರ ಪ್ರತಿಭಟನೆ ಆರಂಭವಾದ ಬಳಿಕ ಪಂಜಾಬ್‌ನ 112 ರೈತರು ಪ್ರಾಣ ಕಳೆದುಕೊಂಡಿದ್ದಾರೆ ಎಂದವರು ಉಲ್ಲೇಖಿಸಿದ್ದಾರೆ. ಈ ಹಿಂದೆ ಸಂವಿಧಾನವನ್ನು 100ಕ್ಕೂ ಹೆಚ್ಚು ಬಾರಿ ತಿದ್ದುಪಡಿ ಮಾಡಲಾಗಿದೆ. ಆದ್ದರಿಂದ ಕೃಷಿ ಕಾಯ್ದೆಗಳನ್ನು ಏಕೆ ರದ್ದುಗೊಳಿಸಬಾರದು? ಎಂದು ಕೇಳಿದರು.

ADVERTISEMENT

ಹೊಸ ಕೃಷಿ ಕಾಯ್ದೆಗಳಿಂದ ಯಾವುದೇ ಸುಧಾರಣೆಯಾಗುವುದಿಲ್ಲ. ಬದಲಾಗಿ ಕೃಷಿ ಕ್ಷೇತ್ರವನ್ನು ನಾಶಗೊಳಿಸಲಿದೆ ಎಂದು ಹೇಳಿದರು.

ಸುಪ್ರೀಂ ಮೆಟ್ಟಿಲೇರಲಿದ್ದೇವೆ...
ಅದೇ ಹೊತ್ತಿಗೆ ರಾಜ್ಯ ಸರ್ಕಾರದ ತಿದ್ದುಪಡಿ ಮಸೂದೆಗಳಿಗೆ ಮಾನ್ಯ ರಾಷ್ಟ್ರಪತಿಗಳು ಒಪ್ಪಿಗೆ ಸೂಚಿಸದಿದ್ದರೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವುದಾಗಿ ಮುಖ್ಯಮಂತ್ರಿ ಅಮರಿಂದರ್ ಎಚ್ಚರಿಸಿದರು.

ಎಲ್ಲ ಪಕ್ಷಗಳು ಸೇರಿದಂತೆ ವಿಧಾನಸಭೆಯು ಸರ್ವಾನುಮತದಿಂದ ಮಸೂದೆಗಳನ್ನು ಅಂಗೀಕರಿಸಿದ ಹೊರತಾಗಿಯೂ ರಾಷ್ಟ್ರಪತಿಗಳ ಅನುಮೋದನೆಗಾಗಿ ಕಳುಹಿಸುವುದರ ಬದಲು ದುರದೃಷ್ಟವಶಾತ್ ರಾಜ್ಯಪಾಲರು ಸುಮ್ಮನೆ ಕುಳಿತಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.