ನವದೆಹಲಿ: ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ಜನವರಿ 26 ಗಣರಾಜ್ಯೋತ್ಸವ ದಿನದಂದು ನಡೆಸಲಿರುವ ಟ್ರ್ಯಾಕ್ಟರ್ ಪರೇಡ್‌ನಲ್ಲಿ, ಕೃಷಿ ಕಾಯ್ದೆ ವಿರುದ್ಧದ ಚಳವಳಿ, ರೈತರ ಹಳ್ಳಿ ಜೀವನ ಸೇರಿದಂತೆ ರೈತರ ಧೈರ್ಯವನ್ನುನಿರೂಪಿಸುವಸ್ತಬ್ಧಚಿತ್ರಗಳ ಅನಾವರಣವಾಗಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರೈತ ಸಂಘಟನೆಯ ಮುಖಂಡರೊಬ್ಬರು, ಪ್ರತಿಭಟನೆಯಲ್ಲಿ ಭಾಗವಹಿಸುವ ಎಲ್ಲ ಸಂಘಟನೆಗಳಿಗೂ ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ದೇಶಾದ್ಯಂತ ಸುಮಾರು ಒಂದು ಲಕ್ಷ ಟ್ರ್ಯಾಕ್ಟರ್-ಟ್ರಾಲಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಇವುಗಳಲ್ಲಿ ಶೇಕಡಾ 30ರಷ್ಟು ಭಾರತದಲ್ಲಿ ರೈತರ ಚಳವಳಿಯ ಇತಿಹಾಸ, ಮಹಿಳಾ ರೈತರ ಪಾತ್ರ, ವಿವಿಧ ರಾಜ್ಯಗಳಲ್ಲಿ ನಡೆಸುವ ಕೃಷಿ ಚಟುವಟಿಕೆಗಳು ಸೇರಿದಂತೆ ವಿಭಿನ್ನ ಸ್ತಬ್ಧಚಿತ್ರಗಳ ಪ್ರದರ್ಶನವಾಗಲಿದೆ.
ಮಹಾರಾಷ್ಟ್ರದ ವಿದರ್ಭ ಪ್ರದೇಶದ ಕೆಲವು ಮಕ್ಕಳು, ರೈತರ ಆತ್ಮಹತ್ಯೆಗಳ ಬಗೆಗಿನ ಸ್ತಬ್ಧಚಿತ್ರವನ್ನು ರಚಿಸುವುದಾಗಿ ತಿಳಿಸಿದ್ದಾರೆ.
ಆತ್ಮಹತ್ಯೆಗೆ ಶರಣಾಗಿರುವ ರೈತರ ಮಕ್ಕಳು ರ‍್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ನೀರಿನ ಕೊರತೆಯನ್ನು ಎದುರಿಸುತ್ತಿರುವ ಪ್ರದೇಶದ ರೈತರ ಕಷ್ಟಗಳನ್ನು ಸ್ತಬ್ಧಚಿತ್ರದಲ್ಲಿ ಬಿಂಬಿಸಲಿದ್ದಾರೆ ಎಂದು ಸ್ವರಾಜ್ ಇಂಡಿಯಾ ರೈತ ಸಂಘಟನೆಯ ಸದಸ್ಯರು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರಾಖಂಡದಂತಹ ರಾಜ್ಯಗಳು ಪ್ರದರ್ಶಿಸುವ ಸ್ತಬ್ಧಚಿತ್ರಗಳಲ್ಲಿ ಕಣಿವೆ ಪ್ರದೇಶಗಳಲ್ಲಿ ಹಣ್ಣು ಹಾಗೂ ತರಕಾರಿಗಳನ್ನು ಹೇಗೆ ಬೆಳೆಸಲಾಗುತ್ತದೆ ಎಂಬುದನ್ನು ಪ್ರದರ್ಶಿಸಲಿದೆ.
ಪಂಜಾಬ್ ಹಾಗೂ ಹರಿಯಾಣದಿಂದ ಭಾಗವಹಿಸುವವರು ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿ ತಂತ್ರಜ್ಞಾನ, ಹಾಲು ಕರೆಯುವ ಹಸುಗಳು ಮತ್ತು ಎತ್ತಿನ ಬಂಡಿ ಓಡಿಸುವ ರೈತರ ಪ್ರತಿಮೆಗಳನ್ನು ಅನಾವರಣಗೊಳಿಸಲಿದ್ದಾರೆ.
ಪ್ರತಿಯೊಂದು ಟ್ರ್ಯಾಕ್ಟರ್ ತ್ರಿವರ್ಣ ಧ್ವಜವನ್ನು ಹೊಂದಿರಲಿದ್ದು, ಜಾನಪದ ಸಂಗೀತ ಹಾಗೂ ದೇಶಭಕ್ತಿ ಹಾಡುಗಳನ್ನು ನುಡಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.