ADVERTISEMENT

ವಲಸೆ ಪ್ರಕ್ರಿಯೆ ತ್ವರಿತ ಕಾರ್ಯಕ್ರಮ ವಿಸ್ತರಣೆ: ಅಮಿತ್ ಶಾ

ಪಿಟಿಐ
Published 11 ಸೆಪ್ಟೆಂಬರ್ 2025, 15:57 IST
Last Updated 11 ಸೆಪ್ಟೆಂಬರ್ 2025, 15:57 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ : ವಲಸೆ ಅನುಮತಿಗಳನ್ನು ತ್ವರಿತವಾಗಿ ಒದಗಿಸುವ ಎಫ್‌ಟಿಐ–ಟಿಟಿಪಿ (ಫಾಸ್ಟ್‌ಟ್ರ್ಯಾಕ್‌ ವಲಸೆ–ವಿಶ್ವಸನೀಯ ಪ್ರಯಾಣಿಕ ಯೋಜನೆ) ಸೌಲಭ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೆಚ್ಚುವರಿಯಾಗಿ ಐದು ವಿಮಾನ ನಿಲ್ದಾಣಗಳಲ್ಲಿ ಗುರುವಾರ ಚಾಲನೆ ನೀಡಿದರು.

ಈ ಯೋಜನೆಯ ಅಡಿಯಲ್ಲಿ ಭಾರತದ ಪ್ರಜೆಗಳು ಹಾಗೂ ಸಾಗರೋತ್ತರ ಭಾರತೀಯ ಪ್ರಜೆ (ಒಸಿಐ) ಕಾರ್ಡ್ ಇರುವವರಿಗೆ ತ್ವರಿತವಾಗಿ ವಲಸೆ ಅನುಮತಿಗಳನ್ನು ನೀಡಲಾಗುತ್ತದೆ.

ಈ ಯೋಜನೆಗೆ ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2024ರ ಜುಲೈನಲ್ಲಿ ಮೊದಲು ಚಾಲನೆ ನೀಡಲಾಗಿತ್ತು. ನಂತರ ಇದನ್ನು ಮುಂಬೈ, ಚೆನ್ನೈ, ಕೋಲ್ಕತ್ತ, ಬೆಂಗಳೂರು, ಹೈದರಾಬಾದ್, ಕೊಚ್ಚಿ ಮತ್ತು ತಿರುವನಂತಪುರ ವಿಮಾನ ನಿಲ್ದಾಣಗಳಿಗೆ ವಿಸ್ತರಿಸಲಾಯಿತು.

ADVERTISEMENT

ಈಗ ಇದನ್ನು ಲಖನೌ, ತಿರುವನಂತಪುರ, ತಿರುಚಿರಾಪಳ್ಳಿ, ಕೊಯಿಕ್ಕೋಡ್ ಮತ್ತು ಅಮೃತಸರ ವಿಮಾನ ನಿಲ್ದಾಣಗಳಿಗೆ ಕೂಡ ಗುರುವಾರ ವಿಸ್ತರಣೆ ಮಾಡಲಾಗಿದೆ.

‘ಈ ಯೋಜನೆಯು ವಲಸೆ ಪ್ರಕ್ರಿಯೆಗಳನ್ನು ಸರಳವಾಗಿಸುತ್ತದೆ, ತ್ವರಿತವಾಗಿಸುತ್ತದೆ’ ಎಂದು ಸಚಿವ ಶಾ ಅವರು ಹೇಳಿದ್ದಾರೆ. ಒಸಿಐ ಗುರುತಿನ ಚೀಟಿ ಇರುವವರು ಹಾಗೂ ವಿದೇಶಗಳಿಗೆ ತೆರಳುವ ಭಾರತೀಯರು ಈ ಸೌಲಭ್ಯದ ಗರಿಷ್ಠ ಪ್ರಯೋಜನ ಪಡೆಯಲಿದ್ದಾರೆ ಎಂದು ಕೂಡ ಶಾ ಹೇಳಿದ್ದಾರೆ.

ಇ–ಗೇಟ್‌ ವ್ಯವಸ್ಥೆ ಮೂಲಕ ಸಹಸ್ರಾರು ಮಂದಿ ಪ್ರಯಾಣಿಕರು ಈವರೆಗೆ ತ್ವರಿತವಾಗಿ ವಲಸೆ ಅನುಮತಿಗಳನ್ನು ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅರ್ಹ ಪ್ರಯಾಣಿಕರಿಗೆ ಇ–ಗೇಟ್ ಸೌಲಭ್ಯವನ್ನು ಬಳಸಲು ಹಾಗೂ ಎಂದಿನ ವಲಸೆ ಸರತಿ ಸಾಲನ್ನು ತಪ್ಪಿಸಿಹೋಗಲು ಅವಕಾಶ ನೀಡಲಾಗುತ್ತದೆ. ಈ ಸೌಲಭ್ಯ ಪಡೆಯಲು ಬಯಸುವ ಪ್ರಯಾಣಿಕರು ಆನ್‌ಲೈನ್‌ ಮೂಲಕ (www.ftittp.mha.gov.in) ಅರ್ಜಿ ಸಲ್ಲಿಸಿ, ತಮ್ಮ ಬಯೋಮೆಟ್ರಿಕ್ ವಿವರಗಳನ್ನು ನೀಡಕು. ಅಲ್ಲದೆ, ಇತರ ಕೆಲವು ಮಾಹಿತಿಯನ್ನೂ ಒದಗಿಸಬೇಕು. ಎಫ್‌ಟಿಐ ನೋಂದಣಿಯು ಗರಿಷ್ಠ ಐದು ವರ್ಷಗಳ ಅವಧಿಗೆ ಅಥವಾ ಪಾಸ್‌ಪೋರ್ಟ್‌ನ ಅವಧಿಯವರೆಗೆ (ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ) ಚಾಲ್ತಿಯಲ್ಲಿ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.