ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ಯಾಗ್ ಅಂಟಿಸದಿದ್ದರೆ (ಲೂಸ್ ಫಾಸ್ಟ್ಯಾಗ್) ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಶುಕ್ರವಾರ ತಿಳಿಸಿದೆ.
ಹೆದ್ದಾರಿಯ ಟೋಲ್‌ಗಳ ಬಳಿ ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ಹೇಳಿದೆ.
‘ಫಾಸ್ಟ್ಯಾಗ್’ ಅನ್ನು ವಾಹನದ ಮುಂಭಾಗದ ಗಾಜಿಗೆ ಅಂಟಿಸಬೇಕು. ಆದರೆ, ಕೆಲವರು ಉದ್ದೇಶಪೂರ್ವಕವಾಗಿ ಅವುಗಳನ್ನು ತಮ್ಮ ವಾಹನಗಳಿಗೆ ಅಂಟಿಸುತ್ತಿಲ್ಲ. ಬದಲಿಗೆ ಕೈಯಲ್ಲಿ ಹಿಡಿದು ಟೋಲ್‌ಗಳ ಮೂಲಕ ಸಾಗುತ್ತಿದ್ದಾರೆ. ಇದರಿಂದ ಟೋಲ್‌ಗಳಲ್ಲಿ ಸುಗಮ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತಿದೆ. ಹೀಗಾಗಿ ಅಂಥ ಫಾಸ್ಟ್ಯಾಗ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅದು ತಿಳಿಸಿದೆ.
ಮುಂದಿನ ದಿನಗಳಲ್ಲಿ ವಾರ್ಷಿಕ ಪಾಸ್ ವ್ಯವಸ್ಥೆ ಮತ್ತು ಬಹು ಪಥ ಮುಕ್ತ ಸಂಚಾರ (ಎಂಎಲ್‌ಎಫ್‌ಎಫ್) ಕಾರ್ಯಾಚರಣೆ ಜಾರಿಯಾಗಲಿದೆ. ಅದಕ್ಕೆ ಪೂರಕವಾಗಿ ಫಾಸ್ಟ್ಯಾಗ್ ದೃಢೀಕರಣ ಮತ್ತು ವ್ಯವಸ್ಥೆಯ ವಿಶ್ವಾಸಾರ್ಹತೆ ಖಚಿತಪಡಿಸಿಕೊಳ್ಳಬೇಕಿದೆ. ಹೀಗಾಗಿ ಅದಕ್ಕೆ ಎದುರಾಗುವ ಅಡೆತಡೆಗಳ ನಿವಾರಣೆಯೂ ಮುಖ್ಯವಾಗಿದೆ ಎಂದು ಪ್ರಾಧಿಕಾರ ಹೇಳಿದೆ.
ಟೋಲ್‌ಗಳ ಬಳಿ ಬರುವ ‘ಲೂಸ್ ಫಾಸ್ಟ್ಯಾಗ್’ ವಾಹನಗಳ ಕುರಿತು ಟೋಲ್ ಸಂಗ್ರಹ ಸಂಸ್ಥೆಗಳು ತಕ್ಷಣವೇ ಪ್ರಾಧಿಕಾರಕ್ಕೆ ವರದಿ ಮಾಡಬೇಕು. ಅದನ್ನು ಆಧರಿಸಿ ಅಂತಹ ಫಾಸ್ಟ್ಯಾಗ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸುವ ಅಥವಾ ಶಾಶ್ವತವಾಗಿ ತಡೆಹಿಡಿಯುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಎನ್‌ಎಚ್‌ಎಐ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.