ADVERTISEMENT

ಅನೇಕ ಜೀವಗಳನ್ನು ಉಳಿಸಲು ಪ್ಲಾಸ್ಮಾ ಚಿಕಿತ್ಸೆ ನೆರವಾಗಿದೆ: ಅರವಿಂದ ಕೇಜ್ರಿವಾಲ್

ದೆಹಲಿಯಲ್ಲಿ ಎರಡನೇ ಪ್ಲಾಸ್ಮಾ ಬ್ಯಾಂಕ್‌ ಉದ್ಘಾಟನೆ

ಏಜೆನ್ಸೀಸ್
Published 14 ಜುಲೈ 2020, 8:29 IST
Last Updated 14 ಜುಲೈ 2020, 8:29 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ಪ್ಲಾಸ್ಮಾ ಚಿಕಿತ್ಸೆಯು ಕೊರೊನಾದಿಂದ ಅನೇಕ ಜೀವಗಳನ್ನು ರಕ್ಷಿಸಲು ಹಾಗೂ ಸಾವಿನ ಪ್ರಮಾಣ ಕಡಿಮೆ ಮಾಡಲು ನೆರವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಲೋಕನಾಯಕ್ ಆಸ್ಪತ್ರೆಯಲ್ಲಿ ರಾಜ್ಯದ ಎರಡನೇ ಪ್ಲಾಸ್ಮಾ ಬ್ಯಾಂಕ್ ಉದ್ಘಾಟಿಸಿ ಮಾತನಾಡಿದ ಅವರು, ‘ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸಿದ ರಾಜ್ಯವಾಗಿದೆ ದೆಹಲಿ. ಇದೀಗ ಮತ್ತೊದು ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸಲಾಗಿದೆ. ಈವರೆಗೆ ಕೋವಿಡ್‌ಗೆ ಲಸಿಕೆ ದೊರೆತಿಲ್ಲ. ಹೀಗಾಗಿ ಜನರ ಜೀವ ಉಳಿಸಲು ಪ್ಲಾಸ್ಮಾ ನೆರವಾಗಲಿದೆ’ ಎಂದು ಹೇಳಿದ್ದಾರೆ.

‘ಪ್ಲಾಸ್ಮಾ ಚಿಕಿತ್ಸೆ ಜೀವ ಉಳಿಸುವಲ್ಲಿ ಶೇ 100ರಷ್ಟು ನೆರವಾಗುತ್ತದೆ ಎಂದು ನಾವು ಹೇಳುತ್ತಿಲ್ಲ. ಆದರೆ, ಅನೇಕ ಜನರ ಪ್ರಾಣ ಉಳಿಸಲು ನೆರವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಸಾವಿನ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಗಿದೆ’ ಎಂದ ಅವರು ಹೇಳಿದ್ದಾರೆ.

ADVERTISEMENT

‘ಮೈಮರೆತರೆ ಕಷ್ಟವಿದೆ’: ಹೊಸ ಕೊರೊನಾ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದರೆ ಜನರು ಮೈಮರೆಯಬಾರದು. ಕೋವಿಡ್ ಹರಡುವಿಕೆ ಮತ್ತೆ ಉತ್ತುಂಗಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಕೇಜ್ರಿವಾಲ್ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿದ್ದೀರಿ. ಹೀಗಾಗಿ ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಸೋಂಕಿನ ವಿರುದ್ಧ ಏಕಾಂಗಿ ಹೋರಾಟದಿಂದ ಜಯಗಳಿಸುವುದು ಸಾಧ್ಯವಿಲ್ಲ ಎಂದರಿತ ನಾವು ಒಗ್ಗಟ್ಟಿನಿಂದ ಸೆಣಸಿದ್ದೇವೆ. ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಿದ್ದೇವೆ. ಮನೆಯಲ್ಲೇ ಪ್ರತ್ಯೇಕವಾಸಕ್ಕೆ ಸಂಬಂಧಿಸಿ ಸಂಘಟಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಕೊರೊನಾದಿಂದಾಗಿ ಈವರೆಗೆ ಒಟ್ಟು 1,13,740 ಜನರಿಗೆ ಸೋಂಕು ತಗುಲಿದ್ದು, 3411 ಮಂದಿ ಮೃತಪಟ್ಟಿದ್ದಾರೆ. 91,312ಮಂದಿ ಗುಣಮುಖರಾಗಿದ್ದಾರೆ. ಸದ್ಯ 19,017 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.