ADVERTISEMENT

ರಾಷ್ಟ್ರಧ್ವಜಕ್ಕೆ ಅವಮಾನ; ರೈತರ ಕುಟುಂಬದ ವಿರುದ್ಧ ಎಫ್‌ಐಆರ್‌

ಶವ ಸಂಸ್ಕಾರದ ವೇಳೆ ಮೃತ ದೇಹದ ಮೇಲೆ ರಾಷ್ಟ್ರಧ್ವಜ ಹೊದಿಸಿದ ಆರೋಪ

ಪಿಟಿಐ
Published 5 ಫೆಬ್ರುವರಿ 2021, 8:17 IST
Last Updated 5 ಫೆಬ್ರುವರಿ 2021, 8:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಿಲಿಭಿತ್, ಉತ್ತರಪ್ರದೇಶ: ಅಪಘಾತದಿಂದ ಮೃತಪಟ್ಟ ರೈತನ ಮೇಲೆ ರಾಷ್ಟ್ರಧ್ವಜ ಹೊದಿಸಿ ಅವಮಾನ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರೈತ ಕುಟುಂಬವೊಂದರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಗಾಜಿಪುರದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆಯಲ್ಲಿ ರೈತರೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದರು. ಮೃತ ರೈತರ ಅಂತ್ಯಕ್ರಿಯೆ ಸಂಸ್ಕಾರದ ಸಮಯದಲ್ಲಿ ಪಾರ್ಥಿವ ಶರೀರದ ಮೇಲೆ ರಾಷ್ಟ್ರಧ್ವಜ ಹೊದಿಸಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಮೃತ ರೈತನ ತಾಯಿ ಮತ್ತು ಸಹೋದರ ಹಾಗೂ ಮತ್ತೊಬ್ಬ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ADVERTISEMENT

ಘಟನೆಯ ವಿವರ:

ಬುಜಿಯಾ ಗ್ರಾಮದ ಸೆಹ್ರಾಮೌ ಪ್ರದೇಶದ ನಿವಾಸಿ ಬಲ್ಜಿಂದ್ರಾ ಅವರು ಜನವರಿ 23ರಂದು ತನ್ನ ಸ್ನೇಹಿತರೊಂದಿಗೆ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿ–ಉತ್ತರ ಪ್ರದೇಶದ ಗಾಜಿಪುರಕ್ಕೆ ತೆರಳಿದ್ದರು. ಪ್ರತಿಭಟನಾ ಕ್ಷೇತ್ರದ ಸಮೀಪದಲ್ಲಿ ಜ. 25 ರಂದು ಸಂಭವಿಸಿದ ಅಪಘಾತದಲ್ಲಿ ಅವರು ಮೃತಪಟ್ಟರು. ಈ ಮೃತ ದೇಹವನ್ನು ಅನಾಮಧೇಯ ವ್ಯಕ್ತಿಯ ಶವ ಎಂದು ತಿಳಿದ ಅಧಿಕಾರಿಗಳು ಸಮೀಪದ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದರು. ‌

‘ಫೆಬ್ರವರಿ 2 ರಂದು ವಿಚಾರ ತಿಳಿದ ಕುಟುಂಬಸ್ಥರು ಶವಾಗಾರದಿಂದ ಮೃತದೇಹವನ್ನು ಪಡೆದುಕೊಂಡು ಹೋಗಿದ್ದರು‘ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೈ ಪ್ರಕಾಶ್ ಯಾದವ್ ಅವರು ಹೇಳಿದ್ದಾರೆ.

‘ಅಂತಿಮ ಸಂಸ್ಕಾರದ ವೇಳೆ ಕುಟುಂಬ ಸದಸ್ಯರು ಮೃತದೇಹದ ಮೇಲೆ ರಾಷ್ಟ್ರಧ್ವಜವನ್ನು ಹೊದಿಸಿದ್ದ, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತ ಧ್ವಜ ಸಂಹಿತೆ ಪ್ರಕಾರ ತ್ರಿವರ್ಣ ಧ್ವಜವನ್ನು ನಾಗರಿಕರ ಅಂತ್ಯಕ್ರಿಯೆಯಲ್ಲಿ ಬಳಸುವುದು ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಘಟನೆ ಬಳಿಕ ಮೃತ ರೈತ ಬಲ್ಜೀಂದ್ರ ಅವರ ತಾಯಿ ಜಸ್ವೀರ್ ಕೌರ್ ಹಾಗೂ ಸಹೋದರ ಗುರ್ವೀಂದರ್, ಮತ್ತೊಬ್ಬ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪ್ರಕಾಶ್ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.