ADVERTISEMENT

ಜೈಲಿನಿಂದ ಬಿಡುಗಡೆಯಾಗಿ 40 KM ರೋಡ್ ಶೋ: ಶಾಹಿ ಮಸೀದಿ ಅಧ್ಯಕ್ಷರ ವಿರುದ್ಧ FIR

ಪಿಟಿಐ
Published 6 ಆಗಸ್ಟ್ 2025, 4:14 IST
Last Updated 6 ಆಗಸ್ಟ್ 2025, 4:14 IST
<div class="paragraphs"><p>FIR</p></div>

FIR

   

ಸಂಭಲ್: ಜೈಲಿನಿಂದ ಬಿಡುಗಡೆಯಾದ ಬಳಿಕ ಮೆರವಣಿಗೆ ಮೂಲಕ ಸಂಭ್ರಮಾಚರಣೆ ನಡೆಸಿದ ಆರೋಪದಲ್ಲಿ ಸಂಭಲ್‌ನ ಶಾಹಿ ಜಮಾ ಮಸೀದಿಯ ನಿರ್ವಹಣಾ ಸಮಿತಿಯ ಅಧ್ಯಕ್ಷ ಹಾಗೂ ಇತರ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.

ಸಬ್ ಇನ್‌ಸ್ಪೆಕ್ಟರ್ ಆಶೀಶ್ ತೋಮರ್‌ ಅವರು ನೀಡಿದ ದೂರಿನ ಅನ್ವಯ, ಶಾಹಿ ಜಮಾ ಮಸೀದಿ ನಿರ್ವಹಣಾ ಸಮಿತಿಯ ಅಧ್ಯಕ್ಷ ಝಫರ್ ಅಲಿ ಹಾಗೂ ಸರ್ಫರಾಜ್, ತಾಹಿರ್, ಹೈದರ್ ಸೇರಿ 50–60 ಮಂದಿ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

ADVERTISEMENT

ಕಳೆದ ವರ್ಷ ಸಂಭಲ್ ಜಮಾ ಮಸೀದಿಯಲ್ಲಿ ನಡೆದ ಸಮೀಕ್ಷೆ ವೇಳೆ ನಡೆದ ಗಲಭೆ ಸಂಬಂಧ ಅಲಿ ಜೈಲಿನಲ್ಲಿದ್ದರು. ಆಗಸ್ಟ್ 1 ರಂದು ಅವರು ಮೊರಾದಾಬಾದ್ ಜೈಲಿನಿಂದ ಬಿಡುಗಡೆಗೊಂಡಿದ್ದರು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಬಿಡುಗಡೆ ಬೆನ್ನಲ್ಲೇ, ಮೊರಾದಾಬಾದ್‌ನಿಂದ ಸಂಭಲ್‌ವರೆಗೆ 40 ಕಿ.ಮೀ ರೋಡ್ ಶೋ ನಡೆಸಿದ್ದರು. ರಸ್ತೆಯುದ್ದಕ್ಕೂ ಅವರಿಗೆ ಸ್ವಾಗತ ಕೋರುವ ಹಲವು ಕಾರ್ಯಕ್ರಮಗಳು ನಡೆದಿದ್ದವು. ಅವರ ವಾಹನದ ಮೇಲೆ ಹೂವುಗಳ ವೃಷ್ಟಿ ನಡೆದಿತ್ತು.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊಗಳನ್ನು ಆಧರಿಸಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಭಾಗಿಯಾದವರ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಮೊಘಲ್ ಕಾಲದ ಸಂಭಲ್ ಜಮಾ ಮಸೀದಿಯ ಸಮೀಕ್ಷೆ ವೇಳೆ ಸ್ಫೋಟಗೊಂಡ ಘರ್ಷಣೆಯಲ್ಲಿ 4 ಮಂದಿ ಸಾವಿಗೀಡಾಗಿದ್ದರು. 29 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.

ಪ್ರಕರಣ ಸಂಬಂಧ ಸಮಾಜವಾದ ಪಕ್ಷದ ಸಂಸದ ಜಿಯಾವುರ್ ರೆಹಮಾನ್ ಬರ್ಕ್ ಹಾಗೂ ಝಫರ್ ಅಲಿ ಸೇರಿ 2,750 ಅಪರಿಚಿತರ ವಿರುದ್ಧ ಎಫ್‌ಐಆರ್‌ಗಳು ದಾಖಲಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.