ಅಜಿತ್ ಪವಾರ್ ಎನ್‌ಸಿಪಿ ಪಕ್ಷದ ನಾಯಕ
ಜಲಗಾಂವ್ (ಮಹಾರಾಷ್ಟ್ರ): ‘ಲಖನೌ–ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನ ಕೋಚ್‌ವೊಂದರಲ್ಲಿ ಬೆಂಕಿ ಬಿದ್ದಿದೆ ಎಂದು ಚಹಾ ಮಾರಾಟಗಾರನೊಬ್ಬ ಹಬ್ಬಿಸಿದ ವದಂತಿಯೇ ಅಪಘಾತಕ್ಕೆ ಕಾರಣ’ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚಹಾ ಮಾರಾಟಗಾರನೊಬ್ಬ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕೂಗಿದ್ದಾನೆ. ಇದನ್ನು ಕೇಳಿಸಿಕೊಂಡ ಉತ್ತರ ಪ್ರದೇಶದ ಇಬ್ಬರು ಪ್ರಯಾಣಿಕರು ಇತರರಿಗೆ ವದಂತಿ ಹಬ್ಬಿಸಿದ್ದಾರೆ. ಇದರಿಂದ ಗಾಬರಿಗೊಂಡು ಪ್ರಯಾಣಿಕರು ಎರಡೂ ಬದಿಯಿಂದ ಪಕ್ಕದ ಹಳಿಗಳಿಗೆ ಜಿಗಿದಿದ್ದಾರೆ’ ಎಂದು ತಿಳಿಸಿದ್ದಾರೆ.
‘ರೈಲು ವೇಗವಾಗಿ ಚಲಿಸುತ್ತಿದ್ದಂತೆ ಪ್ರಯಾಣಿಕರೊಬ್ಬರು ಚೈನ್ ಎಳೆದಿದ್ದಾರೆ. ಇದರಿಂದಾಗಿ ರೈಲು ನಿಂತ ಕೂಡಲೇ ಜನರು ಏಕಾಏಕಿ ಕೆಳಗೆ ಇಳಿದಿದ್ದಾರೆ. ಇದೇ ವೇಳೆಗೆ ಮತ್ತೊಂದು ಹಳಿಯಲ್ಲಿ ಬೆಂಗಳೂರಿನಿಂದ ದೆಹಲಿಗೆ ಸಾಗುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ರೈಲಿಗೆ ಸಿಕ್ಕಿ 13 ಮಂದಿ ಮೃತಪಟ್ಟಿದ್ದಾರೆ. ಆ ಪೈಕಿ 10 ಜನರ ಗುರುತು ಪತ್ತೆಯಾಗಿದೆ. ವದಂತಿ ಹರಡಿದ ಇಬ್ಬರು ಪ್ರಯಾಣಿಕರೂ ಘಟನೆಯಲ್ಲಿ ಗಾಯಗೊಂಡಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.
ಘಟನಾ ಸ್ಥಳದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಅಲ್ಲಲ್ಲಿ ಮೃತದೇಹಗಳು ಬಿದ್ದಿರುವ, ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿರುವ ದೃಶ್ಯಗಳು ವಿಡಿಯೊಗಳಲ್ಲಿವೆ. ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಎರಡೂ ರೈಲುಗಳು ತಮ್ಮ ಸಂಚಾರವನ್ನು ಪುನರಾರಂಭಿಸಿದವು ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.